Pular para o conteúdo
Publicidade

ಕೀರ್ತನೆಗಳು 7

ಬೆನ್ಯಾಮೀನವನಾದ ಕೂಷನ ಮಾತುಗಳ ನಿಮಿತ್ತ ದಾವೀದನು ಯೆಹೋವ ದೇವರಿಗೆ ಹಾಡಿದ ಶಿಗ್ಗಯೋನ್ ಗೀತೆ.

1 ನನ್ನ ಯೆಹೋವ ದೇವರೇ, ನಿಮ್ಮನ್ನೇ ಆಶ್ರಯಿಸಿದ್ದೇನೆ;

ನನ್ನನ್ನು ಬೆನ್ನಟ್ಟಿದ ಎಲ್ಲರಿಂದಲೂ ನನ್ನನ್ನು ರಕ್ಷಿಸಿ ಕಾಪಾಡಿರಿ,

2 ಇಲ್ಲದಿದ್ದರೆ, ನನ್ನನ್ನು ಸಿಂಹದಂತೆ ಅವರು ಹರಿದುಬಿಡುವರು

ರಕ್ಷಿಸಲು ಯಾರೂ ಇಲ್ಲವೆಂದು ನನ್ನನ್ನು ನಾಶಮಾಡಿಬಿಡುವರು.

3 ನನ್ನ ಯೆಹೋವ ದೇವರೇ, ನಾನು ಅನ್ಯಾಯ ಮಾಡಿದ್ದರೆ,

ನನ್ನ ಕೈಗಳಲ್ಲಿ ಅಪರಾಧವಿದ್ದರೆ,

4 ನನ್ನೊಂದಿಗೆ ಸಮಾಧಾನದಿಂದ ಇದ್ದವನಿಗೆ ನಾನು ಕೇಡುಮಾಡಿದ್ದರೆ,

ಕಾರಣವಿಲ್ಲದೆ ನನ್ನ ವೈರಿಯಿಂದ ಏನನ್ನಾದರೂ ಸುಲಿದುಕೊಂಡಿದ್ದರೆ,

5 ಆಗ ನನ್ನ ವೈರಿಯು ಬೆನ್ನಟ್ಟಿ ನನ್ನನ್ನು ಹಿಡಿದುಕೊಳ್ಳಲಿ.

ನನ್ನ ಜೀವವನ್ನು ನೆಲಕ್ಕೆ ಹಾಕಿ ತುಳಿದು ಬಿಡಲಿ

ಮತ್ತು ನನ್ನ ಮಾನವನ್ನು ಮಣ್ಣು ಪಾಲಾಗುವಂತೆ ಮಾಡಲಿ.

6 ಯೆಹೋವ ದೇವರೇ, ನೀವು ಕೋಪದಿಂದ ಎದ್ದೇಳಿರಿ;

ನನ್ನ ವೈರಿಗಳ ಕ್ರೋಧಕ್ಕೆ ವಿರೋಧವಾಗಿ ಎಚ್ಚರಗೊಳ್ಳಿರಿ.

ನನ್ನ ದೇವರೇ, ನ್ಯಾಯಕ್ಕೆ ನಿಮ್ಮ ತೀರ್ಪನ್ನು ನೀಡಲು ಎದ್ದೇಳಿರಿ.

7 ರಾಷ್ಟ್ರಗಳು ನಿಮ್ಮ ಸುತ್ತಲು ಬಂದು ಸೇರಲಿ,

ಉನ್ನತದಿಂದ ನೀವು ಅವರ ಮೇಲೆ ಸಿಂಹಾಸನದಲ್ಲಿದ್ದು ಆಳಿರಿ.

8 ಯೆಹೋವ ದೇವರು ಜನಗಳಿಗೆ ನ್ಯಾಯತೀರಿಸಲಿ.

ಮಹೋನ್ನತರಾದ ಯೆಹೋವ ದೇವರೇ, ನನ್ನ ನೀತಿಯ ಪ್ರಕಾರವೂ,

ಯಥಾರ್ಥತೆಯ ಪ್ರಕಾರವೂ ನನಗೆ ನ್ಯಾಯತೀರಿಸಿರಿ.

9 ದುಷ್ಟರ ಕೆಟ್ಟತನವು ಅಂತ್ಯವಾಗುವಂತೆಯೂ

ನೀತಿವಂತರ ಭದ್ರತೆಯು ನಿಶ್ಚಯವಾಗುವಂತೆಯೂ ಮಾಡಿರಿ.

ನೀತಿಯುಳ್ಳ ದೇವರೇ,

ನೀವು ಹೃದಯವನ್ನೂ ಮನಸ್ಸನ್ನೂ ಪರಿಶೋಧಿಸುವವರಾಗಿದ್ದೀರಿ.

10 ಮಹೋನ್ನತರಾದ ದೇವರು ನನ್ನ ಗುರಾಣಿಯಾಗಿದ್ದಾರೆ,7:10 ಗುರಾಣಿಯಾಗಿದ್ದಾರೆ ಅಥವಾ ಪ್ರಭುವಾಗಿದ್ದಾರೆ

ಅವರು ಯಥಾರ್ಥ ಹೃದಯವುಳ್ಳವರನ್ನು ರಕ್ಷಿಸುತ್ತಾರೆ.

11 ದೇವರು ನೀತಿಯುಳ್ಳ ನ್ಯಾಯಾಧಿಪತಿಯಾಗಿದ್ದಾರೆ.

ದೇವರು ದುಷ್ಟನ ಮೇಲೆ ಸದಾ ರೋಷವುಳ್ಳವರಾಗಿದ್ದಾರೆ.

12 ಅಂಥವರು ತಿರುಗಿಕೊಳ್ಳದಿದ್ದರೆ

ದೇವರು ತಮ್ಮ ಖಡ್ಗ ಮಸೆಯುವರು;

ತಮ್ಮ ಬಿಲ್ಲು ಬಗ್ಗಿಸಿ ಅದನ್ನು ಸಿದ್ಧಮಾಡುವರು.

13 ಅಂಥವರಿಗೆ ಮರಣಾಯುಧಗಳನ್ನು ಸಹ ಸಿದ್ಧಮಾಡಿದ್ದಾರೆ;

ತಮ್ಮ ಅಗ್ನಿಬಾಣಗಳನ್ನು ಸಿದ್ಧಮಾಡುತ್ತಾರೆ.

14 ಅಂಥವರು ದುಷ್ಟತನವನ್ನು ಗರ್ಭಧರಿಸಿ,

ಸೇಡನ್ನು ಗರ್ಭದಲ್ಲಿಟ್ಟುಕೊಂಡು ಸುಳ್ಳನ್ನು ಹೆರುವರು.

15 ಅಂಥವರು ಕುಣಿಯನ್ನು ಅಗೆದಿದ್ದಾರೆ.

ಆದರೆ ತಾವು ಅಗೆದ ಕುಣಿಯೊಳಗೆ ತಾವೇ ಬೀಳುವರು.

16 ಅಂಥವರ ಕೇಡು ಅವರ ಮೇಲೆಯೇ ತಿರುಗುವುದು;

ಅವರ ತಲೆಯ ಮೇಲೆ ಅವರ ಬಲಾತ್ಕಾರವೇ ಇಳಿಯುವುದು.

17 ನಾನು ಯೆಹೋವ ದೇವರನ್ನು ಕೊಂಡಾಡುವೆನು; ಏಕೆಂದರೆ, ಅವರು ನೀತಿಯುಳ್ಳವರು.

ಮಹೋನ್ನತರಾದ ಯೆಹೋವ ದೇವರ ಹೆಸರನ್ನು ಕೀರ್ತನೆ ಮಾಡುವೆನು.

Estes versículos te tocaram? Ore agora!

+581 estão orando agora.

Junte-se à corrente de oração.