Pular para o conteúdo
Publicidade

ಕೀರ್ತನೆಗಳು 94

1 ಯೆಹೋವ ದೇವರೇ, ನೀವು ಪ್ರತೀಕಾರ ಸಲ್ಲಿಸುವ ದೇವರಾಗಿದ್ದೀರಿ.

ಮುಯ್ಯಿ ತೀರಿಸುವವರು ನೀವೇ;

ದೇವರೇ, ನ್ಯಾಯ ತೀರಿಸುವಂತೆ ನಿಮ್ಮನ್ನು ಪ್ರಕಟಿಸಿಕೊಳ್ಳಿರಿ.

2 ಭೂಲೋಕದ ನ್ಯಾಯಾಧಿಪತಿಯೇ,

ಗರ್ವಿಷ್ಠರಿಗೆ ತಕ್ಕ ಪ್ರತೀಕಾರವನ್ನು ಸಲ್ಲಿಸ ಬನ್ನಿರಿ.

3 ಯೆಹೋವ ದೇವರೇ, ಎಲ್ಲಿಯವರೆಗೆ?

ದುಷ್ಟರು ಎಷ್ಟರವರೆಗೆ ಹಿಗ್ಗುತ್ತಿರಬೇಕು?

4 ಕೆಡುಕರು ಉಬ್ಬಿಕೊಂಡು ಮಾತನಾಡುತ್ತಾರೆ.

ಕೇಡು ಮಾಡುವವರೆಲ್ಲರೂ ಕೊಚ್ಚಿಕೊಳ್ಳುತ್ತಾರೆ.

5 ಯೆಹೋವ ದೇವರೇ, ನಿಮ್ಮ ಜನರನ್ನು ಅವರು ಕುಗ್ಗಿಸುತ್ತಾರೆ.

ನಿಮ್ಮ ಬಾಧ್ಯತೆಯನ್ನು ಬಾಧಿಸುತ್ತಾರೆ.

6 ವಿಧವೆಯನ್ನೂ ಪರದೇಶಸ್ಥನನ್ನೂ ಅವರು ಹತ್ಯಮಾಡುತ್ತಾರೆ.

ದಿಕ್ಕಿಲ್ಲದವರನ್ನು ಹತಮಾಡುತ್ತಾರೆ.

7 "ಯೆಹೋವ ದೇವರು ನೋಡುವುದಿಲ್ಲ,

ಯಾಕೋಬನ ದೇವರು ಗ್ರಹಿಸುವುದಿಲ್ಲ,"

ಎಂದು ಅವರು ಹೇಳುತ್ತಾರೆ.

8 ಜನರಲ್ಲಿ ಬುದ್ಧಿಹೀನರೇ, ನೀವು ಗ್ರಹಿಸಿರಿ.

ಮೂರ್ಖರೇ, ಯಾವಾಗ ಬುದ್ಧಿವಂತರಾಗುವಿರಿ?

9 ಕಿವಿಯನ್ನು ನಿರ್ಮಿಸಿದ ದೇವರು ಕೇಳದಿರುವರೇ?

ಕಣ್ಣನ್ನು ರೂಪಿಸಿದವರು ನೋಡುವುದಿಲ್ಲವೇ?

10 ರಾಷ್ಟ್ರಗಳಿಗೆ ಶಿಕ್ಷಣ ಕೊಡುವ ದೇವರು ಶಿಕ್ಷಿಸುವುದಿಲ್ಲವೋ?

ಮಾನವನಿಗೆ ಕಲಿಸುವ ದೇವರಲ್ಲಿ ಜ್ಞಾನದ ಕೊರತೆಯಿದೆಯೋ?

11 ಮನುಷ್ಯನ ಯೋಚನೆಗಳು ವ್ಯರ್ಥವಾದವುಗಳೆಂದು

ಯೆಹೋವ ದೇವರು ತಿಳಿದುಕೊಳ್ಳುತ್ತಾರೆ.

12 ಯೆಹೋವ ದೇವರೇ, ನೀವು ಯಾರನ್ನು ಶಿಕ್ಷಿಸುವಿರೋ ಅಂಥವರು ಧನ್ಯರು.

ನಿಮ್ಮ ನಿಯಮದಿಂದ ಯಾರಿಗೆ ಕಲಿಸಿಕೊಡುವಿರೋ ಅವರು ಧನ್ಯರು.

13 ದುಷ್ಟನಿಗಾಗಿ ಕುಣಿಯು ಅಗಿಯುವವರೆಗೆ

ಅಂಥವನಿಗೆ ವಿಶ್ರಾಂತಿಯನ್ನು ಕೊಡುವಿರಿ.

14 ಯೆಹೋವ ದೇವರು ತಮ್ಮ ಜನರನ್ನು ತಿರಸ್ಕರಿಸುವುದಿಲ್ಲ.

ದೇವರು ತಮ್ಮ ಬಾಧ್ಯತೆಯಾಗಿರುವವರನ್ನು ಎಂದೂ ಮರೆಯುವುದಿಲ್ಲ.

15 ನ್ಯಾಯ ನಿಯಮವು ನೀತಿಯ ಮೇಲೆ ಅವಲಂಬಿಸಿರುವುದು;

ಯಥಾರ್ಥ ಹೃದಯದವರೆಲ್ಲರೂ ಅದನ್ನು ಹಿಂಬಾಲಿಸುವರು.

16 ನನಗೋಸ್ಕರ ದುರ್ಮಾರ್ಗಿಗಳಿಗೆ ವಿರೋಧವಾಗಿ ಏಳುವವನ್ಯಾರು?

ಅಪರಾಧ ಮಾಡುವವರಿಗೆ ವಿರೋಧವಾಗಿ ನನಗೋಸ್ಕರ ನಿಂತು ಕೊಳ್ಳುವವನ್ಯಾರು?

17 ಯೆಹೋವ ದೇವರು ನನಗೆ ಸಹಾಯ ಕೊಡದಿದ್ದರೆ,

ನಾನು ಬೇಗನೇ ಮರಣದ ಮೌನದಲ್ಲಿ ವಾಸಿಸುತ್ತಿದ್ದೆನು.

18 "ನನ್ನ ಕಾಲು ಜಾರುತ್ತಿದೆ," ಎಂದು ನಾನು ಹೇಳುತ್ತಿರುವಾಗಲೇ,

ಯೆಹೋವ ದೇವರೇ, ನಿಮ್ಮ ಪ್ರೀತಿಯು ನನ್ನನ್ನು ಎತ್ತಿ ಹಿಡಿಯಿತು.

19 ನನ್ನ ಚಿಂತೆಗಳು ನನ್ನೊಳಗೆ ಹೆಚ್ಚುತ್ತಿರುವಾಗ,

ನಿಮ್ಮ ಸಂತೈಸುವಿಕೆಯು ನನ್ನ ಮನಸ್ಸನ್ನು ಆನಂದಪಡಿಸುತ್ತದೆ.

20 ತೀರ್ಪುಗಳಿಂದ ಕೇಡನ್ನು ಕಲ್ಪಿಸುವ ಅಪರಾಧದ ನ್ಯಾಯಾಸನವು

ನಿಮ್ಮ ಸಂಗಡ ಅನ್ಯೋನ್ಯವಾಗಿರುವುದೋ?

21 ನೀತಿವಂತನ ವಿರೋಧವಾಗಿ ಅವರು ಕೂಡಿಕೊಳ್ಳುತ್ತಾರೆ;

ಅವರ ನಿರಪರಾಧಿಗಳನ್ನು ಮರಣಕ್ಕೆ ಒಪ್ಪಿಸುತ್ತಾರೆ.

22 ಆದರೆ ಯೆಹೋವ ದೇವರು ನನಗೆ ದುರ್ಗವೂ,

ನನ್ನ ದೇವರೂ, ನನ್ನ ಆಶ್ರಯದ ಬಂಡೆಯೂ ಆಗಿದ್ದಾರೆ.

23 ವೈರಿಯ ಅಪರಾಧವು ಅವರ ಮೇಲೆಯೇ ತಿರುಗಿ ಬೀಳಲಿ;

ಅವರ ಕೇಡಿನಲ್ಲಿ ಅವರನ್ನು ಸಂಹರಿಸುವನು;

ನಮ್ಮ ದೇವರಾದ ಯೆಹೋವ ದೇವರು ಅವರನ್ನು ಸಂಹರಿಸಿ ಬಿಡುವನು.

Estes versículos te tocaram? Ore agora!

+581 estão orando agora.

Junte-se à corrente de oração.