Publicidade

Salmos 10

ಯೆಹೋವನು ಕುಗ್ಗಿದವರನ್ನು ರಕ್ಷಿಸಬೇಕೆಂದು ಬೇಡಿಕೊಳ್ಳುವ ಇಬ್ರಿಯ ಅಕ್ಷರಕ್ರಮಾನುಸಾರವಾದ ಕೀರ್ತನೆ

1 ಯೆಹೋವನೇ, ನೀನು ಏಕೆ ದೂರವಾಗಿ ನಿಂತಿದ್ದೀ?

ಕಷ್ಟಕಾಲದಲ್ಲಿ ಏಕೆ ಮರೆಯಾಗುತ್ತೀ?

2 ದುಷ್ಟರು ಅಹಂಕಾರದಿಂದ ದೀನರನ್ನು ಬಹಳವಾಗಿ ಹಿಂಸಿಸುತ್ತಾರೆ;

ಅವರು ಕಲ್ಪಿಸಿದ ಕುಯುಕ್ತಿಯಲ್ಲಿ ತಾವೇ ಸಿಕ್ಕಿ ಬೀಳಲಿ.

3 ದುಷ್ಟನು ತನ್ನ ಹೃದಯದ ಸಂಕಲ್ಪಗಳು ನೆರವೇರಿತೆಂದು ಕೊಚ್ಚಿಕೊಳ್ಳುತ್ತಾನೆ;

ಲಾಭಬಡುಕನು ಯೆಹೋವನನ್ನು ದೂಷಿಸಿ ತಿರಸ್ಕರಿಸುತ್ತಾನೆ.

4 ದುಷ್ಟನು ಸೊಕ್ಕಿನ ಮುಖದಿಂದ, "ಯೆಹೋವನು ವಿಚಾರಿಸುವುದಿಲ್ಲ" ಎಂದು ಹೇಳಿಕೊಂಡು,

ದೇವರಿಲ್ಲ ಎಂಬುದಾಗಿ ಸದಾ ಯೋಚಿಸುತ್ತಾನೆ.

5 ಅವನ ಪ್ರಯತ್ನಗಳು ಯಾವಾಗಲೂ ಕೈಗೂಡುತ್ತವೆ;

ಆದರೆ ನಿನ್ನ ನ್ಯಾಯತೀರ್ಪು ಮಹೋನ್ನತವಾಗಿರುವುದರಿಂದ

ಅದು ಅವನ ಗ್ರಹಿಕೆಗೆ ಬರುವುದಿಲ್ಲ;

ವೈರಿಗಳ ಗುಂಪನ್ನಾದರೋ ತಾತ್ಸಾರಮಾಡುತ್ತಾನೆ.

6 ಅವನು, "ನಾನು ಕದಲುವುದೇ ಇಲ್ಲ;

ನನಗೆ ವಿಪತ್ತು ಎಂದೆಂದಿಗೂ ಸಂಭವಿಸುವುದಿಲ್ಲ" ಅಂದುಕೊಂಡಿದ್ದಾನೆ.

7 ಅವನ ಬಾಯಿಯು ಶಾಪ, ಬಲಾತ್ಕಾರ ಮತ್ತು ವಂಚನೆಗಳಿಂದ ತುಂಬಿದೆ;

ಅವನ ನಾಲಿಗೆಯ ಕೆಳಗೆ ಹಾನಿಯೂ, ನಾಶನವೂ ಇವೆ.

8 ಅವನು ಗ್ರಾಮಗಳ ಸಂದುಗೊಂದುಗಳಲ್ಲಿ ಹೊಂಚಿಕೊಂಡಿದ್ದು,

ಮರೆಯಾದ ಸ್ಥಳಗಳಲ್ಲಿ ನಿರಪರಾಧಿಗಳನ್ನು ಕೊಲ್ಲುತ್ತಾನೆ.

ಅವನು ಗತಿಹೀನನನ್ನು ಹಿಡಿಯುವುದಕ್ಕೆ ಸಮಯ ನೋಡುತ್ತಾನೆ.

9 ಗವಿಯಲ್ಲಿ ಅಡಗಿಕೊಂಡಿರುವ ಸಿಂಹದಂತೆ ಅವನು ಮರೆಯಾಗಿ ಹೊಂಚಿಕೊಂಡಿರುವನು.

ಅವನು ಬಲೆಯೊಡ್ಡಿ ಕಾದಿದ್ದು, ಕುಗ್ಗಿದವನನ್ನು ಹಿಡಿದು ಎಳೆದುಕೊಂಡು ಹೋಗುತ್ತಾನೆ.

10 ಕುಗ್ಗಿದವನು ಜಜ್ಜಲ್ಪಟ್ಟು ಉರುಳಿಕೊಳ್ಳುತ್ತಾನೆ,

ಗತಿಯಿಲ್ಲದವನು ಅವನ ಬಲಾತ್ಕಾರದಿಂದ ಬಿದ್ದು ಹೋಗುತ್ತಾನೆ.

11 ಆ ದುಷ್ಟನು ತನ್ನೊಳಗೆ, "ದೇವರು ಇವನನ್ನು ಬಿಟ್ಟು ವಿಮುಖನಾಗಿದ್ದಾನೆ;

ಆತನು ನೋಡುವುದೇ ಇಲ್ಲ" ಅಂದುಕೊಳ್ಳುತ್ತಾನೆ.

12 ಯೆಹೋವನೇ, ಏಳು; ದೇವರೇ, ಕುಗ್ಗಿದವನನ್ನು ಮರೆಯಬೇಡ;

ಅವನನ್ನು ರಕ್ಷಿಸುವುದಕ್ಕೆ ಕೈಚಾಚು.

13 "ದೇವರು ವಿಚಾರಿಸುವುದೇ ಇಲ್ಲ" ಎಂದು ಹೇಳುತ್ತಾ,

ದುಷ್ಟನು ನಿನ್ನನ್ನು ಏಕೆ ಅಲಕ್ಷ್ಯಮಾಡಬೇಕು?

14 ನೀನು ಅವರ ಅನ್ಯಾಯ ಹಾಗು ಬಲಾತ್ಕಾರಗಳನ್ನು ನೋಡಿದ್ದಿ;

ಅವುಗಳನ್ನು ವಿಚಾರಿಸುತ್ತೀ, ಗತಿಯಿಲ್ಲದವನು ತನ್ನನ್ನು ನಿನಗೇ ಒಪ್ಪಿಸುವನು;

ದಿಕ್ಕಿಲ್ಲದವನಿಗೆ ನೀನೇ ದಿಕ್ಕು.

15 ದುಷ್ಟನ ಭುಜಬಲವನ್ನು ಮುರಿದುಹಾಕು,

ಕೆಡುಕನ ದುಷ್ಟತ್ವವನ್ನು ಶೋಧಿಸಿ ನಿರ್ಮೂಲಮಾಡಿಬಿಡು.

16 ಯೆಹೋವನು ಯುಗಯುಗಾಂತರಗಳಲ್ಲಿಯೂ ಅರಸನಾಗಿರುವನು;

ಆತನ ದೇಶದಲ್ಲಿ ಅನ್ಯಜನಗಳು ನಿಶ್ಶೇಷರಾದರು.

17 ಯೆಹೋವನೇ, ನೀನು ದೀನರ ಕೋರಿಕೆಯನ್ನು ನೆರವೇರಿಸುವವನೇ ಆಗಿದ್ದಿ;

ಅವರ ಹೃದಯವನ್ನು ಧೈರ್ಯಪಡಿಸುತ್ತಿ; ಅವರ ಮೊರೆಗೆ ಕಿವಿಗೊಡುತ್ತಿ.

18 ನೀನು ದಿಕ್ಕಿಲ್ಲದವರ ಮತ್ತು ಕುಗ್ಗಿದವರ ನ್ಯಾಯವನ್ನು ವಿಚಾರಿಸುತ್ತಿ.

ಹೀಗಿರುವಲ್ಲಿ ಇನ್ನು ಮುಂದೆ ಮಣ್ಣಿನಿಂದಾದ ಮನುಷ್ಯರಿಂದ ಅವರಿಗೆ ಹೆದರಿಕೆ ಉಂಟಾಗುವುದಿಲ್ಲ.

Veja também

Publicidade
Bíblia Online Bíblia Online

Bíblia Online • Versão: 2026-06-18_12-43-22-