Publicidade

Salmos 118

ಹಬ್ಬದ ಗೀತೆ

1 ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ;

ಆತನು ಒಳ್ಳೆಯವನು.

ಆತನ ಕೃಪೆಯು ಶಾಶ್ವತವಾಗಿದೆ.

2 ಇಸ್ರಾಯೇಲರು, "ಆತನ ಕೃಪೆಯು ಶಾಶ್ವತ" ಎಂದು ಹೇಳಲಿ.

3 ಆರೋನನ ಮನೆತನದವರು, "ಆತನ ಕೃಪೆಯು ಶಾಶ್ವತ" ಎಂದು ಹೇಳಲಿ.

4 ಯೆಹೋವನ ಭಕ್ತರು, "ಆತನ ಕೃಪೆಯು ಶಾಶ್ವತ" ಎಂದು ಹೇಳಲಿ.

5 ಇಕ್ಕಟ್ಟಿನಲ್ಲಿ ಯೆಹೋವನಿಗೆ ಮೊರೆಯಿಟ್ಟೆನು;

ಆತನು ಸದುತ್ತರವನ್ನು ದಯಪಾಲಿಸಿ, ನನ್ನನ್ನು ವಿಶಾಲವಾದ ಸ್ಥಳದಲ್ಲಿ ನೆಲೆಸುವಂತೆ ಮಾಡಿದನು.

6 ಯೆಹೋವನು ನನ್ನ ಕಡೆ ಇದ್ದಾನೆ; ಭಯಪಡೆನು.

ಮನುಷ್ಯನು ನನಗೆ ಏನು ಮಾಡಾನು?

7 ಯೆಹೋವನು ನನಗೆ ಇದ್ದಾನೆ;

ಆತನೇ ನನಗೆ ಸಹಾಯಕನು;

ನನ್ನ ವೈರಿಗಳಿಗಾಗುವ ಶಿಕ್ಷೆಯನ್ನು ನೋಡುವೆನು.

8 ಮನುಷ್ಯರಲ್ಲಿ ಭರವಸವಿಡುವುದಕ್ಕಿಂತ,

ಯೆಹೋವನನ್ನು ಆಶ್ರಯಿಸುವುದು ಒಳ್ಳೆಯದು.

9 ಪ್ರಭುಗಳಲ್ಲಿ ಭರವಸವಿಡುವುದಕ್ಕಿಂತ,

ಯೆಹೋವನನ್ನು ಆಶ್ರಯಿಸುವುದು ಒಳ್ಳೆಯದು.

10 ಜನಾಂಗದವರೆಲ್ಲಾ ನನ್ನನ್ನು ಸುತ್ತಿಕೊಂಡರು;

ಯೆಹೋವನ ಬಲದಿಂದ ಅವರನ್ನು ಸಂಹರಿಸುವೆನು.

11 ಅವರು ನನ್ನನ್ನು ಸುತ್ತಲೂ ಮುತ್ತಿದರು;

ಯೆಹೋವನ ಹೆಸರಿನ ಬಲದಿಂದ ಅವರನ್ನು ಸಂಹರಿಸುವೆನು.

12 ಅವರು ಜೇನು ನೊಣಗಳಂತೆ ನನ್ನನ್ನು ಕವಿದರೂ;

ಮುಳ್ಳಿನ ಬೆಂಕಿಯಂತೆ ಕ್ಷಣದಲ್ಲಿ ಅಳಿದುಹೋಗುವರು.

ಯೆಹೋವನ ಹೆಸರಿನಿಂದ ಅವರನ್ನು ಸಂಹರಿಸುವೆನು.

13 ವೈರಿಯೇ, ನನ್ನನ್ನು ಬೀಳುವಂತೆ ಮಾಡಿದಿ;

ಆದರೆ ಯೆಹೋವನು ನನಗೆ ಸಹಾಯ ಮಾಡಿದನು.

14 ನನ್ನ ಬಲವು, ಕೀರ್ತನೆಯು ಯೆಹೋವನೇ;

ಆತನಿಂದ ನನಗೆ ರಕ್ಷಣೆಯುಂಟಾಯಿತು.

15 ಉತ್ಸಾಹಧ್ವನಿಯು, ಜಯಘೋಷವು ನೀತಿವಂತರ ಗುಡಾರಗಳಲ್ಲಿವೆ;

ಯೆಹೋವನ ಬಲಗೈ ಪರಾಕ್ರಮವನ್ನು ನಡೆಸುತ್ತದೆ.

16 ಯೆಹೋವನ ಬಲಗೈ ಉನ್ನತವಾಗಿದೆ;

ಯೆಹೋವನ ಬಲಗೈ ಪರಾಕ್ರಮವನ್ನು ನಡೆಸುತ್ತದೆ.

17 ನಾನು ಸಾಯುವುದಿಲ್ಲ;

ಜೀವದಿಂದಿದ್ದು ಯೆಹೋವನ ಕ್ರಿಯೆಗಳನ್ನು ಸಾರುವೆನು.

18 ಯೆಹೋವನು ನನ್ನನ್ನು ಕಠಿಣವಾಗಿ ಶಿಕ್ಷಿಸಿದನು;

ಆದರೆ ಮರಣಕ್ಕೆ ಒಪ್ಪಿಸಲಿಲ್ಲ.

19 ನೀತಿದ್ವಾರಗಳನ್ನು ತೆರೆಯಿರಿ;

ನಾನು ಒಳಗೆ ಪ್ರವೇಶಿಸಿ ಯೆಹೋವನನ್ನು ಕೊಂಡಾಡುವೆನು.

20 ಇದು ಯೆಹೋವನ ಮಂದಿರದ್ವಾರವು;

ಇದರೊಳಗೆ ಪ್ರವೇಶಿಸತಕ್ಕವರು ನೀತಿವಂತರೇ.

21 ನನಗೆ ಸದುತ್ತರವನ್ನು ದಯಪಾಲಿಸಿ ರಕ್ಷಿಸಿದಾತನೇ,

ನಿನ್ನನ್ನು ಕೊಂಡಾಡುತ್ತೇನೆ.

22 ಮನೆಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ,

ಮುಖ್ಯವಾದ ಮೂಲೆಗಲ್ಲಾಯಿತು;

23 ಇದು ಯೆಹೋವನಿಂದಲೇ ಆಯಿತು;

ನಮಗೆ ಆಶ್ಚರ್ಯವಾಗಿ ತೋರುತ್ತದೆ.

24 ಈ ದಿನವು ಯೆಹೋವನಿಂದಲೇ ನೇಮಕವಾದದ್ದು;

ಇದರಲ್ಲಿ ನಾವು ಉಲ್ಲಾಸದಿಂದ ಆನಂದಿಸೋಣ.

25 ಯೆಹೋವನೇ, ದಯವಿಟ್ಟು ರಕ್ಷಿಸು;

ಯೆಹೋವನೇ, ದಯವಿಟ್ಟು ಸಾಫಲ್ಯಕೊಡು.

26 ಯೆಹೋವನ ಹೆಸರಿನಲ್ಲಿ ಒಳಗೆ ಬರುವವನಿಗೆ ಆಶೀರ್ವಾದ;

ಯೆಹೋವನ ಮಂದಿರದಲ್ಲಿರುವ ನಾವು ನಿಮ್ಮನ್ನು ಆಶೀರ್ವದಿಸುತ್ತೇವೆ.

27 ಯೆಹೋವನೇ ದೇವರು;

ಆತನು ನಮಗೆ ಪ್ರಕಾಶವನ್ನು ಅನುಗ್ರಹಿಸಿದ್ದಾನೆ.

ರೆಂಬೆಗಳನ್ನು ಹಿಡಿದುಕೊಂಡು ಮೆರವಣಿಗೆಯಾಗಿ

ಯಜ್ಞವೇದಿಯ ಕೊಂಬುಗಳ ಸಮೀಪಕ್ಕೆ ಬನ್ನಿರಿ.

28 ನೀನು ನನ್ನ ದೇವರು; ನಿನ್ನನ್ನು ಕೊಂಡಾಡುತ್ತೇನೆ;

ನನ್ನ ದೇವರೇ, ನಿನ್ನನ್ನು ಘನಪಡಿಸುತ್ತೇನೆ.

29 ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ;

ಆತನು ಒಳ್ಳೆಯವನು.

ಆತನ ಕೃಪೆಯು ಶಾಶ್ವತವಾದದ್ದು.

Veja também

Publicidade
Bíblia Online Bíblia Online

Bíblia Online • Versão: 2026-06-18_14-04-22-