Publicidade

Salmos 96

ರಾಜಾಧಿರಾಜನಾದ ಯೆಹೋವನ ಆಗಮನ

1 ಯೆಹೋವನಿಗೆ ಹೊಸ ಕೀರ್ತನೆಯನ್ನು ಹಾಡಿರಿ;

ಎಲ್ಲಾ ಭೂನಿವಾಸಿಗಳೇ, ಯೆಹೋವನಿಗೆ ಹಾಡಿರಿ.

2 ಯೆಹೋವನಿಗೆ ಹಾಡಿರಿ; ಆತನ ನಾಮವನ್ನು ಕೊಂಡಾಡಿರಿ.

ಆತನ ರಕ್ಷಣೆಯನ್ನು ಪ್ರತಿನಿತ್ಯವೂ ಸಾರಿ ಹೇಳಿರಿ.

3 ಜನಾಂಗಗಳಲ್ಲಿ ಆತನ ಘನತೆಯನ್ನೂ,

ಎಲ್ಲಾ ಜನರಲ್ಲಿ ಆತನ ಅದ್ಭುತಕೃತ್ಯಗಳನ್ನೂ ಪ್ರಸಿದ್ಧಪಡಿಸಿರಿ.

4 ಯೆಹೋವನು ದೊಡ್ಡವನೂ, ಬಹು ಸ್ತುತ್ಯನೂ ಆಗಿದ್ದಾನೆ;

ಎಲ್ಲಾ ದೇವರುಗಳಲ್ಲಿ ಆತನೇ ಮಹಾದೇವರು.

5 ಜನಾಂಗಗಳ ದೇವತೆಗಳೆಲ್ಲಾ ಬೊಂಬೆಗಳೇ;

ಯೆಹೋವನಾದರೋ ಗಗನಮಂಡಲವನ್ನು ನಿರ್ಮಿಸಿದನು.

6 ಆತನ ಸಾನ್ನಿಧ್ಯದಲ್ಲಿ ಘನತೆ ಮತ್ತು ಮಹಿಮೆಗಳೂ,

ಆತನ ಪವಿತ್ರಾಲಯದಲ್ಲಿ ಬಲ ಮತ್ತು ಸೌಂದರ್ಯಗಳೂ ಇರುತ್ತವೆ.

7 ಭೂಜನಾಂಗಗಳೇ, ಬಲಪ್ರಭಾವಗಳು ಯೆಹೋವನವೇ, ಯೆಹೋವನವೇ,

ಎಂದು ಹೇಳಿ ಆತನನ್ನು ಘನಪಡಿಸಿರಿ.

8 ಯೆಹೋವನ ನಾಮಕ್ಕೆ ಯೋಗ್ಯವಾದ ಘನವನ್ನು ಸಲ್ಲಿಸಿರಿ;

ಕಾಣಿಕೆಯೊಡನೆ ಆತನ ಅಂಗಳಗಳಿಗೆ ಬನ್ನಿರಿ.

9 ಪರಿಶುದ್ಧತ್ವವೆಂಬ ಭೂಷಣದೊಡನೆ ಯೆಹೋವನಿಗೆ ನಮಸ್ಕರಿಸಿರಿ;

ಎಲ್ಲಾ ಭೂನಿವಾಸಿಗಳೇ, ಆತನ ಮುಂದೆ ಭಯಭಕ್ತಿಯಿಂದಿರಿ.

10 ಯೆಹೋವನು ರಾಜ್ಯಾಧಿಕಾರವನ್ನು ವಹಿಸಿದ್ದಾನೆ;

ಭೂಮಿಯು ಸ್ಥಿರವಾಗಿರುವುದು, ಕದಲುವುದಿಲ್ಲ;

ಸರ್ವರಿಗೂ ನ್ಯಾಯಾನುಸಾರವಾಗಿ ತೀರ್ಪುಕೊಡುವನೆಂದು

ಜನಾಂಗಗಳಲ್ಲಿ ಪ್ರಸಿದ್ಧಪಡಿಸಿರಿ.

11 ಯೆಹೋವನ ಮುಂದೆ ಗಗನಮಂಡಲವು ಹರ್ಷಿಸಲಿ;

ಭೂಲೋಕವು ಸಂತೋಷಿಸಲಿ;

ಸಮುದ್ರವೂ, ಅದರಲ್ಲಿರುವುದೆಲ್ಲವೂ ಘೋಷಿಸಲಿ.

12 ಹೊಲಗಳೂ, ಅವುಗಳ ಪೈರುಗಳೂ ಉಲ್ಲಾಸಿಸಲಿ;

ವನದ ಎಲ್ಲಾ ಮರಗಳು ಉತ್ಸಾಹಧ್ವನಿ ಮಾಡಲಿ.

13 ಆತನು ಬರುತ್ತಾನೆ;

ಭೂನಿವಾಸಿಗಳಿಗೆ ನ್ಯಾಯತೀರಿಸಲಿಕ್ಕೆ ಬರುತ್ತಾನೆ.

ಆತನು ಲೋಕಕ್ಕೆ ನೀತಿಗನುಸಾರವಾಗಿಯೂ,

ಜನಾಂಗಗಳಿಗೆ ಸತ್ಯತೆಯಿಂದಲೂ ನ್ಯಾಯತೀರಿಸುವನು.

Veja também

Publicidade
Bíblia Online Bíblia Online

Bíblia Online • Versão: 2026-06-16_18-40-07-