Publicidade

Salmos 30

ಅಪಾಯದಿಂದ ತಪ್ಪಿಸಲ್ಪಟ್ಟವರು ಯೆಹೋವನನ್ನು ಕೊಂಡಾಡುವುದು
ದಾವೀದನ ಕೀರ್ತನೆ, ದೇವಾಲಯದ ಪ್ರತಿಷ್ಠೆಯಲ್ಲಿ ಹಾಡತಕ್ಕದ್ದು.

1 ಯೆಹೋವನೇ, ನನ್ನ ಶತ್ರುಗಳು ಸಂತೋಷಿಸುವುದಕ್ಕೆ ಅವಕಾಶಕೊಡದೆ,

ನನ್ನನ್ನು ಉದ್ಧರಿಸಿದ್ದರಿಂದ ನಿನ್ನನ್ನು ಕೊಂಡಾಡುವೆನು.

2 ಯೆಹೋವನೇ, ನನ್ನ ದೇವರೇ,

ನಿನಗೆ ಮೊರೆಯಿಡಲು ನನ್ನನ್ನು ಸ್ವಸ್ಥಮಾಡಿದಿ.

3 ಯೆಹೋವನೇ, ನನ್ನ ಪ್ರಾಣವನ್ನು ಪಾತಾಳದಿಂದಲೂ ಎತ್ತಿದಿಯಲ್ಲಾ;

ನನ್ನನ್ನು ಸಮಾಧಿಯಲ್ಲಿ ಸೇರಿಸದೆ ಬದುಕಿಸಿದಿಯಲ್ಲಾ.

4 ಯೆಹೋವನ ಭಕ್ತರೇ, ಆತನನ್ನು ಕೀರ್ತಿಸಿರಿ;

ಆತನ ಪರಿಶುದ್ಧನಾಮವನ್ನು ಕೊಂಡಾಡಿರಿ.

5 ಆತನ ಕೋಪವು ಕ್ಷಣಮಾತ್ರವೇ;

ಆತನ ಅನುಗ್ರಹವೋ ಜೀವಮಾನವೆಲ್ಲಾ ಇರುವುದು;

ಸಂಜೆಗೆ ದುಃಖವೆಂಬುದು ಬಂದು ನಮ್ಮ ಬಳಿಯಲ್ಲಿ ಇಳಿದುಕೊಂಡರೂ,

ಮುಂಜಾನೆ ಹರ್ಷಧ್ವನಿಯು ಕೇಳಿಸುವುದು.

6 ನಾನಂತೂ ಸುಖದಿಂದಿದ್ದಾಗ, "ನಾನು ಎಂದಿಗೂ ಕದಲುವುದಿಲ್ಲ"

ಎಂದು ಹೇಳಿಕೊಂಡಿದ್ದೆನು.

7 ಯೆಹೋವನೇ, ಕೃಪೆಮಾಡಿ ನಾನಿರುವ ಬೆಟ್ಟಕ್ಕೆ ಸ್ಥಿರವಾದ ಬಲವನ್ನು ಅನುಗ್ರಹಿಸಿದಿಯಲ್ಲಾ.

ಆದರೂ ನೀನು ನಿನ್ನ ಮುಖವನ್ನು ಮರೆಮಾಡಿಕೊಂಡಾಗ ನಾನು ಕಳವಳಗೊಂಡೆನು.

8 ಯೆಹೋವನೇ, ನಿನಗೆ ಮೊರೆಯಿಟ್ಟೆನು; ನನ್ನ ಒಡೆಯನಿಗೆ ಬಿನ್ನವಿಸಿ,

9 "ನನ್ನನ್ನು ಕೊಂದುಹಾಕಿ ಸಮಾಧಿಗೆ ಸೇರಿಸಿದರೆ ನಿನಗೆ ಲಾಭವೇನು?

ಮಣ್ಣು ನಿನ್ನನ್ನು ಸ್ತುತಿಸುವುದೋ? ಅದು ನಿನ್ನ ನಂಬಿಕೆಯನ್ನು ಹೊಗಳುವುದೇನು?

10 ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳಿ ಕರುಣಿಸು;

ಯೆಹೋವನೇ, ನನ್ನ ಸಹಾಯಕ್ಕೆ ಬಾ" ಎಂದು ಹೇಳಿದೆನು.

11 ಆಗ ನೀನು ನನ್ನ ಗೋಳಾಟವನ್ನು ತಪ್ಪಿಸಿ, ಸಂತೋಷದಿಂದ ಕುಣಿದಾಡುವಂತೆ ಮಾಡಿದಿ;

ನಾನು ಕಟ್ಟಿಕೊಂಡಿದ್ದ ಗೋಣಿತಟ್ಟನ್ನು ತೆಗೆದುಬಿಟ್ಟು,

ಹರ್ಷವಸ್ತ್ರವನ್ನು ನನಗೆ ಧಾರಣೆಮಾಡಿಸಿದಿ.

12 ಇದರಿಂದ ಯೆಹೋವನೇ, ನನ್ನ ಮನಸ್ಸು ಎಡೆಬಿಡದೆ ನಿನ್ನನ್ನು ಕೀರ್ತಿಸುತ್ತಿರುವುದು;

ನನ್ನ ದೇವರೇ, ನಿನ್ನನ್ನು ಸದಾಕಾಲವೂ ಸ್ತುತಿಸುವೆನು.

Veja também

Publicidade
Bíblia Online Bíblia Online

Bíblia Online • Versão: 2026-06-15_21-32-39-