Publicidade

Salmos 48

ಚೀಯೋನನ್ನು ರಕ್ಷಿಸಿದ್ದಕ್ಕಾಗಿ ಯೆಹೋವನನ್ನು ಕೊಂಡಾಡುವುದು
ಹಾಡು; ಕೋರಹೀಯರ ಕೀರ್ತನೆ.

1 ಯೆಹೋವನು ಮಹೋನ್ನತನು;

ನಮ್ಮ ದೇವರು ತನ್ನ ಪರಿಶುದ್ಧ ಪರ್ವತ ನಗರದಲ್ಲಿ ಸರ್ವಸ್ತುತಿಗೆ ಪಾತ್ರನಾಗಿದ್ದಾನೆ.

2 ರಾಜಾಧಿರಾಜನ ಪಟ್ಟಣವಿರುವ ಚೀಯೋನ್ ಪರ್ವತವು

ಉತ್ತರದಿಕ್ಕಿನಲ್ಲಿ ಉನ್ನತವಾಗಿಯೂ, ರಮ್ಯವಾಗಿಯೂ,

ಭೂಲೋಕದಲ್ಲೆಲ್ಲಾ ಕಂಗೊಳಿಸುತ್ತಿರುವುದು.

3 ದೇವರು ಅದರ ಕೊತ್ತಲುಗಳಲ್ಲಿ,

ತಾನೇ ಭದ್ರವಾದ ಬುರುಜೆಂದು ಕೀರ್ತಿಪಡೆದನು.

4 ರಾಜರು ಕೂಡಿಕೊಂಡರು;

ಅವರು ಒಗ್ಗಟ್ಟಾಗಿ ಬಂದರು.

5 ನೋಡಿ ಬೆರಗಾದರು;

ತಲ್ಲಣಿಸಿ ಓಡಿಹೋದರು.

6 ಕಂಪನವೂ ಹೆರುವವಳಂತೆ,

ವೇದನೆಯೂ ಅವರಿಗೆ ಉಂಟಾಯಿತು.

7 ದೇವರೇ, ನೀನು ಬಿರುಗಾಳಿಯಿಂದ ತಾರ್ಷಿಷ್ ದೇಶದ

ದೊಡ್ಡ ದೊಡ್ಡ ಹಡಗುಗಳನ್ನು ಒಡೆದುಬಿಟ್ಟಂತಾಯಿತು.

8 ನಾವು ಕಿವಿಯಿಂದ ಕೇಳಿದಂತೆಯೇ ಈಗ ಕಣ್ಣಾರೆ ಕಂಡೆವು;

ನಮ್ಮ ದೇವರೂ ಸೇನಾಧೀಶನೂ ಆಗಿರುವ

ಯೆಹೋವನ ಸಂಸ್ಥಾನದಲ್ಲಿ ಆತನ ಮಹತ್ತನ್ನು ನೋಡಿದ್ದೇವೆ.

ದೇವರು ಅದನ್ನು ಶಾಶ್ವತವಾಗಿ ಸ್ಥಾಪಿಸುವನು. ಸೆಲಾ

9 ದೇವರೇ, ನಾವು ನಿನ್ನ ಆಲಯದಲ್ಲಿ,

ನಿನ್ನ ಪ್ರೀತಿಯನ್ನು ಸ್ಮರಿಸುತ್ತೇವೆ;

10 ದೇವರೇ, ನಿನ್ನ ನಾಮದ ಘನತೆಗೆ ತಕ್ಕಂತೆಯೇ,

ಲೋಕವೆಲ್ಲಾ ನಿನ್ನನ್ನು ಹೊಗಳುವುದು.

ನಿನ್ನ ಬಲಗೈ ನೀತಿಯನ್ನು ನೆರವೇರಿಸಿತು.

11 ಚೀಯೋನ್ ಪಟ್ಟಣದವರು ಹರ್ಷಿಸಲಿ;

ನೀನು ನ್ಯಾಯವನ್ನು ನಿರ್ಣಯಿಸಿದ್ದರಿಂದ,

ಯೆಹೂದ ಸೀಮೆಯ ನಿವಾಸಿಗಳು ಆನಂದಪಡಲಿ.

12 ಚೀಯೋನ್ ಸಂಸ್ಥಾನದ ಸುತ್ತಲೂ ಸಂಚರಿಸಿ,

ಅದರ ಬುರುಜುಗಳನ್ನು ಲೆಕ್ಕಿಸಿರಿ.

13 ಅದರ ಪ್ರಾಕಾರಗಳನ್ನು ಚೆನ್ನಾಗಿ ನೋಡಿರಿ;

ಅದರ ಕೊತ್ತಲುಗಳನ್ನು ಸೂಕ್ಷ್ಮವಾಗಿ ಗಮನಿಸಿರಿ.

14 ಆಗ ನೀವು ನಿಮ್ಮ ಮುಂದಣ ಸಂತತಿಯವರಿಗೆ,

ದೇವರು ಇಂಥವನು; ಆತನು ಯುಗಯುಗಾಂತರಗಳಲ್ಲಿಯೂ ನಮ್ಮ ದೇವರು,

ನಿರಂತರವೂ ನಮ್ಮನ್ನು ನಡೆಸುವವನಾಗಿದ್ದಾನೆ ಎಂದು ತಿಳಿಸುವಿರಿ.

Veja também

Publicidade
Bíblia Online Bíblia Online

Bíblia Online • Versão: 2026-06-15_21-32-39-