Publicidade

Salmos 4

ವಿಶ್ವಾಸಯುಕ್ತ ಸಂಧ್ಯಾಕಾಲದ ಗೀತೆ
ಪ್ರಧಾನ ಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ತಂತಿವಾದ್ಯದೊಡನೆ ಹಾಡತಕ್ಕದ್ದು; ದಾವೀದನ ಕೀರ್ತನೆ.

1 ನ್ಯಾಯವನ್ನು ಸ್ಥಾಪಿಸುವ ನನ್ನ ದೇವರೇ, ನಿನಗೆ ಮೊರೆಯಿಡುತ್ತೇನೆ;

ಸದುತ್ತರವನ್ನು ದಯಪಾಲಿಸು.

ನನ್ನನ್ನು ಅಪತ್ತಿನಿಂದ ಬಿಡಿಸಿ, ಸುರಕ್ಷಿತ ಸ್ಥಳದಲ್ಲಿ ಸೇರಿಸಿದಾತನೇ,

ನನ್ನನ್ನು ಕರುಣಿಸಿ ನನ್ನ ಪ್ರಾರ್ಥನೆಯನ್ನು ಆಲಿಸು.

2 ಜನರೇ, ನೀವು ಎಷ್ಟರವರೆಗೆ ನನ್ನ ಗೌರವವನ್ನು ಕೆಡಿಸುವಿರಿ,

ಎಷ್ಟರವರೆಗೆ ನನ್ನನ್ನು ಅವಮಾನಪಡಿಸುವಿರಿ?

ಎಷ್ಟರವರೆಗೆ ವ್ಯರ್ಥವಾದದ್ದನ್ನು ಪ್ರೀತಿಸಿ ಸುಳ್ಳನ್ನು ಹಿಂಬಾಲಿಸುವಿರಿ? ಸೆಲಾ

3 ಯೆಹೋವನು ತನ್ನ ಭಕ್ತನನ್ನು ತನಗೋಸ್ಕರ ಪ್ರತ್ಯೇಕಿಸಿಕೊಂಡಿದ್ದಾನೆ ಎಂದು ತಿಳಿದುಕೊಳ್ಳಿರಿ.

ನಾನು ಆತನಿಗೆ ಮೊರೆಯಿಡುವಾಗೆಲ್ಲಾ ಆತನು ಕೇಳುತ್ತಾನೆ.

4 ಭಯಪಡಿರಿ, ಪಾಪಮಾಡಬೇಡಿರಿ;

ಹಾಸಿಗೆಯ ಮೇಲೆ ಇರುವಾಗ ಹೃದಯದಲ್ಲೇ ಆಲೋಚಿಸಿಕೊಳ್ಳಿರಿ ಮತ್ತು ಮೌನವಾಗಿರಿ. ಸೆಲಾ

5 ನ್ಯಾಯವಾದ ಯಜ್ಞಗಳನ್ನು ಸಮರ್ಪಿಸಿರಿ;

ಯೆಹೋವನಲ್ಲಿಯೇ ಭರವಸವಿಡಿರಿ.

6 "ನಮಗೆ ಒಳ್ಳೆಯದನ್ನು ಮಾಡುವವರು ಯಾರಿದ್ದಾರೆ?" ಎಂದು ಅನೇಕರು ಹೇಳಿಕೊಳ್ಳುತ್ತಾರೆ.

ಯೆಹೋವನೇ, ನೀನು ಪ್ರಸನ್ನಮುಖದಿಂದ ನಮ್ಮನ್ನು ನೋಡಬೇಕು.

7 ಧಾನ್ಯದ್ರಾಕ್ಷಿಗಳು ಸಮೃದ್ಧಿಯಾಗಿ ಬೆಳೆದ ಸುಗ್ಗಿ ಕಾಲದಲ್ಲಿ ಜನರಿಗಾಗುವ ಸಂತೋಷಕ್ಕಿಂತಲೂ

ನೀನು ನನ್ನ ಹೃದಯದಲ್ಲಿ ಹೆಚ್ಚಾದ ಆನಂದವನ್ನು ಉಂಟುಮಾಡಿದ್ದೀ.

8 ನಾನು ನಿರ್ಭಯವಾಗಿರುವುದರಿಂದ ಮಲಗಿಕೊಂಡು ಕೂಡಲೆ ನಿದ್ದೆಮಾಡುವೆನು.

ಏಕೆಂದರೆ ಯೆಹೋವನೇ, ನನಗೆ ಯಾವ ಅಪಾಯವೂ ಬಾರದಂತೆ ನೀನು ನನ್ನನ್ನು ಸುರಕ್ಷಿತವಾಗಿ ಕಾಪಾಡುತ್ತೀ.

Veja também

Publicidade
Bíblia Online Bíblia Online

Bíblia Online • Versão: 2026-06-15_21-32-39-