Publicidade

Salmos 113

ಯೆಹೋವನನ್ನು ಸ್ತುತಿಸುವುದು

1 ಯೆಹೋವನಿಗೆ ಸ್ತೋತ್ರ!

ಯೆಹೋವನ ಸೇವಕರೇ, ಸ್ತೋತ್ರಮಾಡಿರಿ;

ಯೆಹೋವನ ನಾಮವನ್ನು ಸ್ತುತಿಸಿರಿ.

2 ಈಗಿನಿಂದ ಯುಗಯುಗಕ್ಕೂ,

ಯೆಹೋವನ ನಾಮವು ಕೀರ್ತಿಸಲ್ಪಡಲಿ.

3 ಯೆಹೋವನ ನಾಮವು ಪೂರ್ವದಿಂದ,

ಪಶ್ಚಿಮದವರೆಗೂ ಸ್ತುತಿಹೊಂದಲಿ.

4 ಯೆಹೋವನು ಎಲ್ಲಾ ಜನಾಂಗಗಳಲ್ಲಿ ಮಹೋನ್ನತನು;

ಆತನ ಪ್ರಭಾವವು ಮೇಲಣ ಲೋಕಕ್ಕಿಂತಲೂ ಉನ್ನತವಾಗಿದೆ.

5 ನಮ್ಮ ಯೆಹೋವ ದೇವರಿಗೆ ಸಮಾನರು ಯಾರು?

ಆತನು ಉನ್ನತಲೋಕದಲ್ಲಿ ಆಸನಾರೂಢನಾಗಿ,

6 ಆಕಾಶವನ್ನೂ, ಭೂಮಿಯನ್ನೂ ನೋಡಲಿಕ್ಕೆ ಬಾಗುತ್ತಾನೆ.

7 ಆತನು ದೀನರನ್ನು ಧೂಳಿನಿಂದ ಎಬ್ಬಿಸಿ,

ಬಡವರನ್ನು ತಿಪ್ಪೆಯಿಂದ ಎತ್ತುತ್ತಾನೆ.

8 ಪ್ರಭುಗಳ ಜೊತೆಯಲ್ಲಿ,

ಅಂದರೆ ಅವರ ಜನಾಧಿಪತಿಗಳೊಡನೆ ಅವರನ್ನು ಕುಳ್ಳಿರಿಸುತ್ತಾನೆ.

9 ಬಂಜೆಯು ಮಕ್ಕಳೊಂದಿಗೆ,

ಸಂತೋಷದಿಂದ ಮನೆಯಲ್ಲಿ ವಾಸಿಸುವ ಹಾಗೆ ಮಾಡುತ್ತಾನೆ.

ಯೆಹೋವನಿಗೆ ಸ್ತೋತ್ರ!

Veja também

Publicidade
Bíblia Online Bíblia Online

Bíblia Online • Versão: 2026-06-18_14-04-22-