Publicidade

Salmos 77

ದೇವರ ಮಹತ್ಕಾರ್ಯಗಳ ಧ್ಯಾನ
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಯೆದುತೂನನ ರೀತಿಯಲ್ಲಿ ಹಾಡತಕ್ಕದ್ದು; ಆಸಾಫನ ಕೀರ್ತನೆ.

1 ದೇವರಿಗೆ ಮೊರೆಯಿಡುವೆನು, ಕೂಗಿ ಮೊರೆಯಿಡುವೆನು;

ಆತನು ನನಗೆ ಕಿವಿಗೊಡುವನು.

2 ಇಕ್ಕಟ್ಟಿನಲ್ಲಿ ಸ್ವಾಮಿಯನ್ನು ಕರೆದೆನು;

ಬೇಸರವಿಲ್ಲದೆ ರಾತ್ರಿಯೆಲ್ಲಾ ಕೈಚಾಚಿಕೊಂಡೇ ಇದ್ದೆನು.

ನನ್ನ ಮನಸ್ಸು ಶಾಂತಿಯನ್ನು ಹೊಂದಲೊಲ್ಲದೆ ಇತ್ತು.

3 ನಾನು ವ್ಯಥೆಪಡುತ್ತಾ ದೇವರನ್ನು ಸ್ಮರಿಸುವೆನು;

ಮನಗುಂದಿದವನಾಗಿಯೇ ಹಂಬಲಿಸುವೆನು.

4 ನಾನು ರೆಪ್ಪೆಗಳನ್ನು ಮುಚ್ಚದಂತೆ ನೀನು ಮಾಡಿದಿ.

ತಳಮಳಗೊಂಡು ಮಾತನಾಡಲಾರದೆ ಇದ್ದೆನು.

5 ಹಳೆಯ ದಿನಗಳನ್ನೂ,

ಪುರಾತನ ವರ್ಷಗಳನ್ನೂ ಜ್ಞಾಪಕಮಾಡಿಕೊಂಡೆನು.

6 ನಾನು ರಾತ್ರಿಯಲ್ಲಿ ಮಾಡುತ್ತಿದ್ದ ಗಾನವನ್ನು ನೆನಪಿಸಿಕೊಳ್ಳುವೆನು,

ನನ್ನ ಆಂತರ್ಯದಲ್ಲಿ ಮಾತನಾಡಿಕೊಳ್ಳುವೆನು ಅಂದುಕೊಂಡು

ನನ್ನ ಮನಸ್ಸಿನಲ್ಲಿ,

7 "ಕರ್ತನು ಸದಾಕಾಲಕ್ಕೂ ಬಿಟ್ಟೇಬಿಡುವನೋ?

ಆತನು ಪುನಃ ಪ್ರಸನ್ನನಾಗುವುದಿಲ್ಲವೋ?

8 ಆತನ ಕೃಪಾವಾತ್ಸಲ್ಯವು ನಿಂತೇ ಹೋಯಿತೋ?

ಆತನ ವಾಗ್ದಾನವು ಎಂದೆಂದಿಗೂ ಬಿದ್ದೇ ಹೋಯಿತೋ?

9 ದೇವರು ದಯೆ ತೋರಿಸಲಿಕ್ಕೆ ಮರೆತುಬಿಟ್ಟನೋ?

ಕೋಪದಿಂದ ತನ್ನ ಕರಳುಗಳನ್ನು ಬಿಗಿಹಿಡಿದಿದ್ದಾನೋ?" ಎಂದು ಅಂದುಕೊಂಡೆನು ಸೆಲಾ

10 ಪುನಃ ನಾನು,

"ಹೀಗೆ ನೆನಸುವುದು ನನ್ನ ಬಲಹೀನತೆಯೇ.

ಪರಾತ್ಪರನಾದ ದೇವರ ಭುಜಬಲವು ಪ್ರಕಟವಾದ ವರ್ಷಗಳನ್ನು ಜ್ಞಾಪಿಸಿಕೊಳ್ಳುವೆನು.

11 ಯೆಹೋವನ ಕೃತ್ಯಗಳನ್ನು ವರ್ಣಿಸುವೆನು;

ಪೂರ್ವದಿಂದ ನೀನು ನಡೆಸಿದ ಅದ್ಭುತಗಳನ್ನು ನೆನಪು ಮಾಡಿಕೊಳ್ಳುವೆನು.

12 ನಿನ್ನ ಕಾರ್ಯಗಳನ್ನೆಲ್ಲಾ ಧ್ಯಾನಿಸುವೆನು;

ನಿನ್ನ ಪ್ರವರ್ತನೆಗಳನ್ನು ಸ್ಮರಿಸುವೆನು" ಅಂದುಕೊಂಡೆನು.

13 ದೇವರೇ, ನಿನ್ನ ಮಾರ್ಗವು ಪರಿಶುದ್ಧವಾದುದು.

ನಮ್ಮ ದೇವರಂತೆ ಮಹತ್ವವುಳ್ಳ ದೇವರು ಯಾರು?

14 ಅದ್ಭುತಗಳನ್ನು ನಡೆಸುವ ದೇವರು ನೀನೇ;

ಜನಾಂಗಗಳಲ್ಲಿ ಪರಾಕ್ರಮವನ್ನು ತೋರ್ಪಡಿಸಿದಿ.

15 ಯಾಕೋಬ ಮತ್ತು ಯೋಸೇಫರ ವಂಶದವರಾದ ನಿನ್ನ ಪ್ರಜೆಯನ್ನು,

ಭುಜಬಲದಿಂದ ಬಿಡುಗಡೆಮಾಡಿದಿ. ಸೆಲಾ

16 ದೇವರೇ, ಜಲರಾಶಿಗಳು ನಿನ್ನನ್ನು ಕಂಡವು;

ಕಾಣುತ್ತಲೇ ತಳಮಳಗೊಂಡು

ತಳದವರೆಗೂ ಅಲ್ಲಕಲ್ಲೋಲವಾದವು.

17 ಮೇಘಮಂಡಲವು ಮಳೆಗರೆಯಿತು;

ಆಕಾಶವು ಗರ್ಜಿಸಿತು;

ನಿನ್ನ ಬಾಣಗಳು ಎಲ್ಲಾ ಕಡೆಯೂ ಹಾರಿದವು.

18 ಬಿರುಗಾಳಿಯಲ್ಲಿ ನಿನ್ನ ಗುಡುಗು ಕೇಳಿಸಿತು;

ಮಿಂಚುಗಳು ಭೂಮಂಡಲವನ್ನು ಬೆಳಗಿಸಿದವು;

ಭೂಮಿಯು ಅಲ್ಲಾಡಿ ಕಂಪಿಸಿತು.

19 ನೀನು ಸಮುದ್ರದಲ್ಲಿ ಮಾರ್ಗಮಾಡಿದಿ;

ಮಹಾಜಲರಾಶಿಗಳನ್ನು ದಾಟಿದಿ;

ನಿನ್ನ ಹೆಜ್ಜೆ ಗುರುತು ಕಾಣಲಿಲ್ಲ.

20 ಕುರುಬನು ಕುರಿಹಿಂಡನ್ನು ಹೇಗೋ,

ಹಾಗೆಯೇ ನೀನು ಮೋಶೆ ಮತ್ತು ಆರೋನರ ಮುಖಾಂತರ,

ನಿನ್ನ ಪ್ರಜೆಯನ್ನು ಮುನ್ನಡೆಸಿದಿ.

Veja também

Publicidade
Bíblia Online Bíblia Online

Bíblia Online • Versão: 2026-06-15_21-32-39-