Publicidade

Salmos 132

ದಾವೀದನ ಮನೆತನವನ್ನು ಪುನಃಸ್ಥಾಪಿಸಬೇಕೆಂಬ ಪ್ರಾರ್ಥನೆ
ಯಾತ್ರಾಗೀತೆ.

1 ಯೆಹೋವನೇ, ದಾವೀದನ ಹಿತಕ್ಕೋಸ್ಕರ,

ಅವನ ಶ್ರಮೆಗಳನ್ನು ನೆನಪುಮಾಡಿಕೋ.

2 ಯಾಕೋಬನ ಶೂರನಾದ ಯೆಹೋವನಿಗಾಗಿ

ಒಂದು ವಾಸಸ್ಥಾನವನ್ನು ಏರ್ಪಡಿಸುವ ತನಕ,

3 "ನಾನು ನನ್ನ ಮನೆಯೊಳಗೆ ಪ್ರವೇಶಿಸುವುದಿಲ್ಲ,

ಮಂಚವನ್ನು ಹತ್ತುವುದಿಲ್ಲ,

4 ಕಣ್ಣುಗಳನ್ನು ಮುಚ್ಚುವುದಿಲ್ಲ,

ರೆಪ್ಪೆಗಳನ್ನು ಕೂಡಿಸುವುದಿಲ್ಲ" ಎಂದು

5 ಅವನು ಯೆಹೋವನಿಗೆ ಪ್ರಮಾಣಮಾಡಿ,

ಯಾಕೋಬನ ಶೂರನಿಗೆ ಹರಕೆ ಮಾಡಿಕೊಂಡನಲ್ಲಾ.

6 ಇಗೋ, ಅದು ಎಫ್ರಾತದಲ್ಲಿರುತ್ತದೆಂದು ಕೇಳಿದೆವು;

ಯಹಾರ್ ಮೈದಾನದಲ್ಲಿ ನಮಗೆ ಸಿಕ್ಕಿತು.

7 "ಬನ್ನಿರಿ, ಆತನ ಮಂದಿರಕ್ಕೆ ಹೋಗಿ

ಆತನ ಪಾದಪೀಠದ ಮುಂದೆ ಅಡ್ಡಬೀಳೋಣ!"

8 ಯೆಹೋವನೇ, ಎದ್ದು ನಿನ್ನ ಪ್ರತಾಪಯುಕ್ತವಾದ ಮಂಜೂಷದೊಡನೆ,

ನಿನ್ನ ವಾಸಸ್ಥಾನಕ್ಕೆ ಬಂದು ನೆಲೆಸು.

9 ನಿನ್ನ ಯಾಜಕರು ನೀತಿಯೆಂಬ ವಸ್ತ್ರವನ್ನು ಹೊದ್ದುಕೊಳ್ಳಲಿ;

ನಿನ್ನ ಭಕ್ತರು ಉತ್ಸಾಹಧ್ವನಿ ಮಾಡಲಿ.

10 ನಿನ್ನ ಸೇವಕನಾದ ದಾವೀದನನ್ನು ನೆನಪುಮಾಡಿಕೋ;

ನೀನು ಅಭಿಷೇಕಿಸಿದವನನ್ನು ತಳ್ಳಿಬಿಡಬೇಡ.

11 ಯೆಹೋವನು ದಾವೀದನಿಗೆ ಮಾಡಿದ ಪ್ರಮಾಣವು ಸ್ಥಿರವಾಗಿದೆ;

ಆತನು ಅದನ್ನು ಬದಲಿಸುವುದಿಲ್ಲ.

"ನಿನ್ನ ಸಂತಾನದವರನ್ನು ನಿನ್ನ ಸಿಂಹಾಸನದ ಮೇಲೆ ಕುಳ್ಳಿರಿಸುವೆನು;

12 ನಿನ್ನ ಮಕ್ಕಳು ನನ್ನ ನಿಬಂಧನೆಯನ್ನೂ,

ನಾನು ಆಜ್ಞಾಪಿಸಿದ ಕಟ್ಟಳೆಗಳನ್ನೂ ಕೈಕೊಂಡು ನಡೆಯುವುದಾದರೆ,

ಅವರ ಮಕ್ಕಳು ನಿನ್ನ ಸಿಂಹಾಸನದಲ್ಲಿ ಸದಾಕಾಲ ಕುಳಿತುಕೊಳ್ಳುವರು."

13 ನಿಶ್ಚಯವಾಗಿ ಯೆಹೋವನು ಚೀಯೋನನ್ನು ಅಪೇಕ್ಷಿಸಿ,

ತನ್ನ ನಿವಾಸಕ್ಕಾಗಿ ಆರಿಸಿಕೊಂಡಿದ್ದಾನೆ.

14 ಆತನು, "ಇದು ನನ್ನ ಶಾಶ್ವತ ವಾಸಸ್ಥಾನ;

ಇಲ್ಲೇ ಇರುವೆನು; ಇದು ನನಗೆ ಇಷ್ಟ.

15 ಇದರ ಆದಾಯವನ್ನು ಆಶೀರ್ವದಿಸುವೆನು;

ಇಲ್ಲಿಯ ಬಡವರನ್ನು ಆಹಾರದಿಂದ ತೃಪ್ತಿಗೊಳಿಸುವೆನು;

16 ಯಾಜಕರಿಗೆ ರಕ್ಷಣೆಯೆಂಬ ವಸ್ತ್ರವನ್ನು ಹೊದಿಸುವೆನು;

ಭಕ್ತರು ಉತ್ಸಾಹಧ್ವನಿ ಮಾಡುವರು.

17 ಇಲ್ಲಿಯೇ ದಾವೀದನ ಕೊಂಬು ಚಿಗುರುವಂತೆ ಮಾಡುವೆನು;

ನನ್ನ ಅಭಿಷಿಕ್ತನ ದೀಪವು ಉರಿಯುತ್ತಲೇ ಇರಬೇಕೆಂದು ನೇಮಿಸಿದ್ದೇನೆ.

18 ಅವನ ವೈರಿಗಳನ್ನು ನಾಚಿಕೆಯೆಂಬ ವಸ್ತ್ರದಿಂದ ಹೊದಿಸುವೆನು;

ಆದರೆ ಅವನ ಮೇಲೆ ಕಿರೀಟವು ಶೋಭಿಸುತ್ತಿರುವುದು."

Veja também

Publicidade
Bíblia Online Bíblia Online

Bíblia Online • Versão: 2026-06-18_14-04-22-