Publicidade

Salmos 57

ಶತ್ರುಬಾಧಿತನಾದ ಸದ್ಭಕ್ತನ ವಿಜ್ಞಾಪನೆಯೂ ಸ್ತೋತ್ರವೂ
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು. ಅಲ್ತಷ್ಖೇತೆಂಬ ರಾಗ; ದಾವೀದನು ಸೌಲನ ಭೀತಿಯಿಂದ ಓಡಿಹೋಗಿ ಗುಹೆಯಲ್ಲಿ ಅಡಗಿಕೊಂಡಿದ್ದಾಗ ರಚಿಸಿದ ಕಾವ್ಯ.

1 ದೇವರೇ, ಕರುಣಿಸು, ನನ್ನನ್ನು ಕರುಣಿಸು.

ನೀನೇ ನನ್ನ ಆಶ್ರಯಸ್ಥಾನವಲ್ಲವೇ!

ಆಪತ್ತುಗಳು ಕಳೆದುಹೋಗುವ ತನಕ ನಿನ್ನ ರೆಕ್ಕೆಗಳ ಮರೆಯನ್ನು ಆಶ್ರಯಿಸಿಕೊಳ್ಳುವೆನು.

2 ಪರಾತ್ಪರನಾದ ದೇವರಿಗೆ ಮೊರೆಯಿಡುವೆನು,

ನನ್ನ ಕಾರ್ಯವನ್ನು ಸಫಲಮಾಡುವ ದೇವರನ್ನು ಕೂಗಿ ಕರೆಯುವೆನು.

3 ಆತನು ಪರಲೋಕದಿಂದ ಆಲಿಸಿ,

ನಿಂದಕರ ಮಾತಿನಿಂದ ನನ್ನನ್ನು ತಪ್ಪಿಸುವನು; ಸೆಲಾ

ತನ್ನ ಪ್ರೀತಿಯನ್ನು ಮತ್ತು ಸತ್ಯತೆಯನ್ನೂ ತೋರ್ಪಡಿಸುವನು.

4 ನಾನು ಸಿಂಹಗಳಂತಿರುವ ಶತ್ರುಗಳ ಮಧ್ಯದಲ್ಲಿ ಸಿಕ್ಕಿದ್ದೇನೆ;

ದುರಾಶೆಯಿಂದ ಕಬಳಿಸುವಂತಹ ಮನುಷ್ಯರ ನಡುವೆ ಬಿದ್ದಿದ್ದೇನೆ.

ಅವರ ಹಲ್ಲುಗಳು ಈಟಿ ಮತ್ತು ಬಾಣಗಳಂತಿವೆ,

ನಾಲಿಗೆಗಳು ಹದವಾದ ಕತ್ತಿಗಳೇ.

5 ದೇವರೇ, ಮೇಲಣ ಲೋಕಗಳಲ್ಲಿ ನಿನ್ನ ಪ್ರಭಾವವು ಮೆರೆಯಲಿ;

ಭೂಮಂಡಲದ ಮೇಲೆಲ್ಲಾ ನಿನ್ನ ಮಹತ್ವವು ಹಬ್ಬಲಿ.

6 ನನ್ನ ಕಾಲಿಗೆ ಬಲೆಯನ್ನು ಹಾಸಿದ್ದಾರೆ;

ನನ್ನ ಪ್ರಾಣವು ಕುಂದಿಹೋಯಿತು.

ನನ್ನ ದಾರಿಯಲ್ಲಿ ಕುಣಿಯನ್ನು ಅಗೆದರು;

ತಾವೇ ಅದರಲ್ಲಿ ಬಿದ್ದುಹೋದರು. ಸೆಲಾ

7 ದೇವರೇ, ನನ್ನ ಹೃದಯವು ಸ್ಥಿರವಾಗಿದೆ, ಸ್ಥಿರವಾಗಿದೆ.

ನಾನು ವಾದ್ಯಗಳನ್ನು ನುಡಿಸುತ್ತಾ ಹಾಡುವೆನು.

8 ನನ್ನ ಮನವೇ, ಚುರುಕಾಗು; ಸ್ವರಮಂಡಲವೇ, ಕಿನ್ನರಿಯೇ, ಎಚ್ಚರವಾಗಿರಿ.

ಸಂಕೀರ್ತನೆಯಿಂದ ಉದಯವನ್ನು ಎದುರುಗೊಳ್ಳುವೆನು.

9 ಕರ್ತನೇ, ಜನಾಂಗಗಳಲ್ಲಿ ನಿನ್ನನ್ನು ಸ್ತುತಿಸುವೆನು;

ಸರ್ವದೇಶದವರೊಳಗೆ ನಿನ್ನನ್ನು ಕೊಂಡಾಡುವೆನು.

10 ಏಕೆಂದರೆ ನಿನ್ನ ಕೃಪೆಯು ಆಕಾಶವನ್ನೂ,

ನಿನ್ನ ಸತ್ಯತೆಯು ಮುಗಿಲನ್ನೂ ಮುಟ್ಟುವಷ್ಟು ದೊಡ್ಡವಾಗಿವೆ.

11 ದೇವರೇ, ಮೇಲಣ ಲೋಕಗಳಲ್ಲಿ ನಿನ್ನ ಪ್ರಭಾವವು ಮೆರೆಯಲಿ;

ಭೂಮಂಡಲದ ಮೇಲೆಲ್ಲಾ ನಿನ್ನ ಮಹತ್ವವು ಹಬ್ಬಲಿ.

Veja também

Publicidade
Bíblia Online Bíblia Online

Bíblia Online • Versão: 2026-06-18_06-35-37-