Publicidade

Salmos 46

ಯೆಹೋವನು ಭಕ್ತಪಾಲಕನೂ, ಸರ್ವಾಧಿಪತಿಯೂ ಎಂಬುದು
1 ಪ್ರಧಾನಗಾಯಕನ ಕೀರ್ತನಸಂಗ್ರಹದಿಂದ ಆರಿಸಿಕೊಂಡದ್ದು; ಕೋರಹೀಯರ ಗೀತೆ; ತಾರಕಸ್ಥಾಯಿಯಲ್ಲಿ ಹಾಡತಕ್ಕದ್ದು.

1 ದೇವರು ನಮಗೆ ಆಶ್ರಯದುರ್ಗವಾಗಿದ್ದಾನೆ;

ಆತನು ಇಕ್ಕಟ್ಟಿನಲ್ಲಿ ನಮಗೆ ವಿಶೇಷ ಸಹಾಯಕನು.

2 ಆದುದರಿಂದ ಭೂಮಿಯು ಮಾರ್ಪಟ್ಟರೂ,

ಬೆಟ್ಟಗಳು ಸಮುದ್ರದಲ್ಲಿ ಮುಳುಗಿಹೋದರೂ,

ನಮಗೇನೂ ಭಯವಿಲ್ಲ.

3 ಸಮುದ್ರವು ಬೋರ್ಗರೆಯುತ್ತಾ ನೊರೆಯನ್ನು ಕಾರಿದರೇನು?

ಅದರ ಅಲ್ಲಕಲ್ಲೋಲಗಳಿಂದ ಪರ್ವತಗಳು ಚಲಿಸಿದರು ಭಯವಿಲ್ಲ? ಸೆಲಾ

4 ಒಂದು ನದಿ ಇದೆ; ಅದರ ಕಾಲುವೆಗಳು,

ಪರಾತ್ಪರನಾದ ದೇವರ ಪರಿಶುದ್ಧ ನಿವಾಸಸ್ಥಾನವಾಗಿರುವ,

ದೇವರ ನಗರವನ್ನು ಸಂತೋಷಪಡಿಸುತ್ತವೆ.

5 ದೇವರು ಇದರಲ್ಲಿದ್ದಾನೆ; ಇದಕ್ಕೆ ಚಲನವೇ ಇಲ್ಲ.

ಉದಯಕಾಲದಲ್ಲಿಯೇ ದೇವರು ಇದರ ಸಹಾಯಕ್ಕೆ ಬರುವನು.

6 ಜನಾಂಗಗಳು ಕಳವಳಗೊಂಡವು;

ರಾಜ್ಯಗಳು ತತ್ತರಿಸಿದವು. ಆತನು ಗರ್ಜಿಸಲು ಭೂಲೋಕವೆಲ್ಲಾ ಕರಗಿ ಹೋಯಿತು.

7 ಸೇನಾಧೀಶ್ವರನಾದ ಯೆಹೋವನು ನಮ್ಮ ಸಂಗಡ ಇದ್ದಾನೆ;

ಯಾಕೋಬ ವಂಶದವರ ದೇವರು ನಮಗೆ ಆಶ್ರಯ ದುರ್ಗವಾಗಿದ್ದಾನೆ. ಸೆಲಾ

8 ಬನ್ನಿರಿ, ಯೆಹೋವನ ಕಾರ್ಯವನ್ನು ನೋಡಿರಿ;

ಆತನು ಭೂಲೋಕದಲ್ಲಿ ಎಂಥಾ ವಿನಾಶವನ್ನು ಉಂಟುಮಾಡಿದ್ದಾನೆ.

9 ಲೋಕದ ಎಲ್ಲಾ ಭಾಗದಲ್ಲೂ ಯುದ್ಧವನ್ನು ಸ್ಥಗಿತಗೊಳಿಸಿದ್ದಾನೆ;

ಬಿಲ್ಲುಗಳನ್ನೂ, ಭಲ್ಲೆಯಗಳನ್ನೂ ಮುರಿದುಹಾಕಿದ್ದಾನೆ;

ರಥಗಳನ್ನು ದಹಿಸಿಬಿಟ್ಟಿದ್ದಾನೆ.

10 "ಕಾದಾಡುವುದನ್ನು ನಿಲ್ಲಿಸಿರಿ, ನಾನೇ ದೇವರು;

ಲೋಕದ ಸಮಸ್ತ ಜನಗಳಿಗೂ ಸರ್ವಾಧಿಪತಿಯು ನಾನೇ ಎಂದು ತಿಳಿಯಿರಿ" ಎಂದು ಹೇಳಿದ್ದಾನೆ.

11 ಸೇನಾಧೀಶ್ವರನಾದ ಯೆಹೋವನು ನಮ್ಮ ಸಂಗಡ ಇದ್ದಾನೆ;

ಯಾಕೋಬವಂಶದವರ ದೇವರು ನಮಗೆ ಆಶ್ರಯ ದುರ್ಗವಾಗಿದ್ದಾನೆ. ಸೆಲಾ.

Veja também

Publicidade
Bíblia Online Bíblia Online

Bíblia Online • Versão: 2026-06-15_21-32-39-