Publicidade

Salmos 112

ಭಕ್ತರ ಧನ್ಯತೆ

1 ಯೆಹೋವನಿಗೆ ಸ್ತೋತ್ರ!

ಯಾರು ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿ,

ಆತನ ಆಜ್ಞೆಗಳಲ್ಲಿ ಅತ್ಯಾನಂದಪಡುವನೋ ಅವನೇ ಧನ್ಯನು.

2 ಅವನ ಸಂತಾನವು ಲೋಕದಲ್ಲಿ ಬಲಿಷ್ಠವಾಗುವುದು;

ನೀತಿವಂತನ ವಂಶವು ಶುಭಹೊಂದುವುದು.

3 ಅವನ ಮನೆಯಲ್ಲಿ ಸಿರಿಸಂಪತ್ತುಗಳು ಇರುವವು;

ಅವನ ನೀತಿಯು ಸದಾಕಾಲವೂ ಫಲಿಸುತ್ತಿರುವುದು.

4 ಯಥಾರ್ಥರಿಗೆ ಕತ್ತಲೆಯಲ್ಲಿಯೂ ಜ್ಯೋತಿ ಮೂಡುವುದು;

ದಯೆಯೂ, ಕನಿಕರವೂ, ನೀತಿಯುಳ್ಳ ದೇವರೇ ಆ ಜ್ಯೋತಿ.

5 ದಯಾಳುವಾಗಿ ಧನಸಹಾಯ ಮಾಡುವವನೂ,

ತನ್ನ ಕಾರ್ಯಗಳನ್ನು ನೀತಿಯಿಂದ ನಡೆಸುವವನೂ ಭಾಗ್ಯವಂತನು.

6 ಅವನು ಎಂದಿಗೂ ಕದಲುವುದಿಲ್ಲ;

ನೀತಿವಂತನನ್ನು ಯಾವಾಗಲೂ ಸ್ಮರಿಸುವರು.

7 ಅವನಿಗೆ ಕೆಟ್ಟ ಸುದ್ದಿಯ ಭಯವಿರುವುದಿಲ್ಲ;

ಯೆಹೋವನಲ್ಲಿ ಭರವಸವಿಟ್ಟಿರುವುದರಿಂದ,

ಅವನ ಮನಸ್ಸು ಸ್ಥಿರವಾಗಿರುವುದು.

8 ದುಷ್ಟರಿಗಾಗುವ ಶಿಕ್ಷೆಯನ್ನು ಕಣ್ಣಾರೆ ಕಾಣುವೆನೆಂಬ ಭರವಸೆ ಇರುವುದರಿಂದ

ಅವನ ಮನಸ್ಸು ದೃಢವಾಗಿದೆ, ಹೆದರುವುದಿಲ್ಲ.

9 ಬಡವರಿಗೆ ಉದಾರವಾಗಿ ಕೊಡುತ್ತಾನೆ;

ಅವನ ನೀತಿಯ ಫಲವು ಸದಾಕಾಲವೂ ಇರುವುದು.

ಮಹಿಮೆಯೊಡನೆ ಅವನ ಕೊಂಬು ಎತ್ತಲ್ಪಡುವುದು.

10 ದುಷ್ಟನು ನೋಡಿ ವ್ಯಥೆಪಡುವನು;

ಅವನು ಹಲ್ಲುಕಡಿಯುತ್ತಾ ನಾಶವಾಗುವನು.

ದುಷ್ಟರ ನಿರೀಕ್ಷೆಯು ಭಂಗವಾಗುವುದು.

Veja também

Publicidade
Bíblia Online Bíblia Online

Bíblia Online • Versão: 2026-06-18_14-04-22-