Publicidade

Salmos 75

ನ್ಯಾಯಾಧೀಶನಾದ ದೇವರಿಗೆ ಸ್ತುತಿ
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಅಲ್ತಷ್ಖೇತೆಂಬ ರಾಗ; ಕೀರ್ತನೆ; ಹಾಡು; ಆಸಾಫನದು.

1 ದೇವರೇ, ಕೊಂಡಾಡುತ್ತೇವೆ;

ನಿನ್ನನ್ನು ಕೊಂಡಾಡುತ್ತೇವೆ. ನಿನ್ನ ನಾಮ ಮಹತ್ವವನ್ನು ನೆನಪುಮಾಡಿಕೊಂಡು;

ನಿನ್ನ ಮಹತ್ಕಾರ್ಯಗಳನ್ನು ವರ್ಣಿಸುತ್ತೇವೆ.

2 ದೇವರು ನುಡಿದದ್ದು, "ನಿಯಮಿತ ಕಾಲವು ಬಂದಾಗ,

ನಾನೇ ನೀತಿಯಿಂದ ತೀರ್ಪುಕೊಡುವೆನು.

3 ಎಲ್ಲಾ ನಿವಾಸಿಗಳೊಡನೆ ಭೂಮಿಯು ಕರಗಿ ಹೋದರೂ,

ಅದರ ಸ್ತಂಭಗಳನ್ನು ಸ್ಥಾಪಿಸುವವನು ನಾನೇ" ಎಂಬುದು. ಸೆಲಾ

4 ನಾನು ಹೆಮ್ಮೆಗಾರರಿಗೆ, "ಕೊಚ್ಚಿಕೊಳ್ಳಬೇಡಿರಿ" ಎಂದು;

ದುಷ್ಟರಿಗೆ, "ನಿಮ್ಮ ಕೊಂಬುಗಳನ್ನು ಮೇಲೆತ್ತಬೇಡಿರಿ;

5 ಕೊಂಬುಗಳನ್ನು ಮೇಲೆತ್ತಬೇಡಿರಿ;

ಸೊಕ್ಕಿನಿಂದ ಮಾತನಾಡಬೇಡಿರಿ" ಎಂದು ಹೇಳುವೆನು.

6 ಏಕೆಂದರೆ ಉದ್ಧಾರವು ಪೂರ್ವದಿಂದಾಗಲಿ, ಪಶ್ಚಿಮದಿಂದಾಗಲಿ,

ಅರಣ್ಯದಿಂದಾಗಲಿ ಬರುವುದಿಲ್ಲ.

7 ದೇವರೇ ನ್ಯಾಯಾಧೀಶನಾಗಿ ಒಬ್ಬನನ್ನು ತೆಗೆದು,

ಇನ್ನೊಬ್ಬನನ್ನು ಸ್ಥಾಪಿಸುತ್ತಾನೆ.

8 ಯೆಹೋವನ ಕೈಯಲ್ಲಿ ಪಾತ್ರೆ ಇದೆ;

ಅದು ಔಷಧಿಮಿಶ್ರವಾಗಿ ಉಕ್ಕುವ ದ್ರಾಕ್ಷಾರಸದಿಂದ ತುಂಬಿದೆ.

ಅದರಿಂದ ಹೊಯ್ದು ಹಂಚುತ್ತಾನೆ.

ಲೋಕದ ದುಷ್ಟರೆಲ್ಲರೂ ಅದರೊಳಗಿನ ಮಡ್ಡಿಯನ್ನು ಸಹ ಕುಡಿದು ಮುಗಿಸಬೇಕು.

9 ನಾನಾದರೋ ಸದಾ ವರ್ಣಿಸುವವನಾಗಿ,

ಯಾಕೋಬ ವಂಶದವರ ದೇವರನ್ನು ಸಂಕೀರ್ತಿಸುತ್ತಾ ವರ್ಣಿಸಿ ಹಾಡುವೆನು.

10 ದುಷ್ಟರ ಕೊಂಬುಗಳನ್ನೆಲ್ಲಾ ಮುರಿದುಬಿಡುವೆನು;

ಆದರೆ ನೀತಿವಂತರ ಕೊಂಬುಗಳನ್ನು ಉನ್ನತಮಟ್ಟಕ್ಕೆ ಎತ್ತಲ್ಪಡುವವು.

Veja também

Publicidade
Bíblia Online Bíblia Online

Bíblia Online • Versão: 2026-06-16_18-40-07-