Publicidade

Salmos 63

ಭಕ್ತನು ದೇವದರ್ಶನವನ್ನು ಹಂಬಲಿಸಿ ಸಂತೃಪ್ತಿಹೊಂದಿದ್ದು
ದಾವೀದನು ಯೆಹೂದ ಸೀಮೆಯ ಅರಣ್ಯದಲ್ಲಿದ್ದಾಗ ರಚಿಸಿದ ಕೀರ್ತನೆ.

1 ದೇವರೇ, ನೀನೇ ನನ್ನ ದೇವರು;

ನಾನು ನಿನ್ನ ದರ್ಶನವನ್ನು ಕುತೂಹಲದಿಂದ ಎದುರುನೋಡುತ್ತೇನೆ.

ನನ್ನ ಆತ್ಮವೂ ನಿನಗಾಗಿ ಹಂಬಲಿಸುತ್ತದೆ;

ನೀರಿಲ್ಲದೆ ಒಣಗಿದ ಭೂಮಿಯಲ್ಲಿದ್ದವನು ನೀರಿಗಾಗಿಯೋ ಎಂಬಂತೆ,

ನನ್ನ ಶರೀರವು ನಿನಗಾಗಿ ದಾಹಗೊಳ್ಳುತ್ತದೆ.

2 ನಿನ್ನ ಮಂದಿರದಲ್ಲಿ ನಾನು ನಿನ್ನ ಮಹತ್ತನ್ನೂ, ಪ್ರಭಾವವನ್ನೂ ಕಂಡ ಪ್ರಕಾರ,

ಈಗಲೂ ಕಾಣಬೇಕೆಂದು ಅಪೇಕ್ಷಿಸುತ್ತೇನೆ.

3 ನಿನ್ನ ಪ್ರೇಮಾನುಭವವು ಜೀವಕ್ಕಿಂತಲೂ ಶ್ರೇಷ್ಠ;

ನನ್ನ ಬಾಯಿ ನಿನ್ನನ್ನು ಕೀರ್ತಿಸುವುದು.

4 ನನ್ನ ಜೀವಮಾನದಲ್ಲೆಲ್ಲಾ ಹೀಗೆಯೇ ನಿನ್ನನ್ನು ಹಾಡಿ ಹರಸುತ್ತಾ,

ನಿನ್ನ ಹೆಸರೆತ್ತಿ ಕೈಮುಗಿಯುವೆನು.

5 ಮೃಷ್ಟಭೋಜನದಿಂದಲೋ ಎಂಬಂತೆ,

ನನ್ನ ಮನಸ್ಸು ಸಂತುಷ್ಟವಾಗಿರುವುದು;

ನನ್ನ ಬಾಯಿ ಉತ್ಸಾಹಧ್ವನಿ ಮಾಡುತ್ತಾ ನಿನ್ನನ್ನು ಕೊಂಡಾಡುವುದು.

6 ನಾನು ಹಾಸಿಗೆಯ ಮೇಲಿದ್ದುಕೊಂಡು ನಿನ್ನನ್ನು ಸ್ಮರಿಸುವಾಗ,

ರಾತ್ರಿಯ ಜಾವಗಳಲ್ಲಿ ನಿನ್ನನ್ನು ಧ್ಯಾನಿಸುತ್ತಿರುವೆನು.

7 ನೀನು ನನಗೆ ಸಹಾಯಕನಾಗಿರುವೆಯಲ್ಲಾ;

ನಿನ್ನ ರೆಕ್ಕೆಗಳ ಮರೆಯಲ್ಲಿ ಸುರಕ್ಷಿತನಾಗಿದ್ದುಕೊಂಡು,

ಆನಂದಘೋಷ ಮಾಡುತ್ತಿರುವೆನು.

8 ನನ್ನ ಆತ್ಮವು ನಿನ್ನನ್ನು ಅಂಟಿಕೊಂಡು ಹಿಂಬಾಲಿಸುವುದು;

ನಿನ್ನ ಬಲಗೈ ನನಗೆ ಆಧಾರವಾಗಿರುವುದು.

9 ನನ್ನ ಜೀವಕ್ಕೆ ಕೇಡು ಬಗೆಯುವವರೋ,

ಅಧೋಲೋಕಕ್ಕೆ ಇಳಿದುಹೋಗುವರು.

10 ಅವರು ಕತ್ತಿಗೆ ಬಲಿಯಾಗುವರು;

ನರಿಗಳ ಪಾಲಾಗುವರು.

11 ಆದರೆ ಅರಸನೋ ದೇವರಲ್ಲಿ ಆನಂದಿಸುವನು,

ದೇವರ ಮೇಲೆ ಆಣೆಯಿಡುವವರೆಲ್ಲರು

ಸುಳ್ಳುಬಾಯಿ ಮುಚ್ಚಿಹೋಗುವುದನ್ನು ಕಂಡು ಹಿಗ್ಗುವರು.

Veja também

Publicidade
Bíblia Online Bíblia Online

Bíblia Online • Versão: 2026-06-15_21-32-39-