Publicidade

Salmos 9

ನ್ಯಾಯಸ್ಥಾಪಕನಾದ ಯೆಹೋವನನ್ನು ಕೊಂಡಾಡುವ ಇಬ್ರಿಯ ಅಕ್ಷರಕ್ರಮಾನುಸಾರವಾದ ಕೀರ್ತನೆ
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಮೂತ್ಲಬ್ಬೇನೆಂಬ ರಾಗ; ದಾವೀದನ ಕೀರ್ತನೆ.

1 ಯೆಹೋವನೇ, ಮನಃಪೂರ್ವಕವಾಗಿ ನಿನ್ನನ್ನು ಕೊಂಡಾಡುವೆನು;

ನೀನು ಮಾಡಿದ ಅದ್ಭುತಕಾರ್ಯಗಳನ್ನೆಲ್ಲಾ ವರ್ಣಿಸುವೆನು.

2 ಪರಾತ್ಪರನಾದ ದೇವರೇ, ನಾನು ನಿನ್ನಲ್ಲಿ ಸಂತೋಷಿಸಿ ಉತ್ಸಾಹಗೊಳ್ಳುವೆನು;

ನಿನ್ನ ಹೆಸರನ್ನು ಕೀರ್ತಿಸುವೆನು.

3 ನನ್ನ ಹಗೆಗಳು ನಿನ್ನ ಎದುರಿನಿಂದ ಹಿಂದಿರುಗಿ ಎಡವಿಬಿದ್ದು ಹಾಳಾದರಲ್ಲಾ.

4 ನನ್ನ ವ್ಯಾಜ್ಯದಲ್ಲಿ ನೀನು ನ್ಯಾಯವನ್ನು ಸ್ಥಾಪಿಸಿದಿ;

ನೀನು ಆಸನಾರೂಢನಾಗಿ ನೀತಿಯಿಂದ ನ್ಯಾಯವನ್ನು ನಿರ್ಣಯಿಸುತ್ತಿ.

5 ನೀನು ಜನಾಂಗಗಳನ್ನು ಹೆದರಿಸಿ ದುಷ್ಟರನ್ನು ನಾಶ ಮಾಡಿದ್ದಿ,

ಅವರ ಹೆಸರನ್ನು ಯುಗಯುಗಾಂತರಕ್ಕೂ ಅಳಿಸಿಬಿಟ್ಟಿದ್ದಿ.

6 ಶತ್ರುಗಳು ನಿಶ್ಶೇಷವಾದರು;

ನೀನು ಕೆಡವಿದ ಅವರ ಪಟ್ಟಣಗಳು ಸಂಪೂರ್ಣವಾಗಿ ಹಾಳಾದವು.

ಅವರ ಸ್ಮರಣೆಯೇ ಇಲ್ಲವಾಯಿತು.

7 ಯೆಹೋವನಾದರೋ ಯಾವಾಗಲೂ ನೆಲೆಗೊಂಡಿದ್ದು,

ನ್ಯಾಯವಿಚಾರಿಸುವುದಕ್ಕಾಗಿ ತನ್ನ ಸಿಂಹಾಸನವನ್ನು ಸ್ಥಾಪಿಸಿದ್ದಾನೆ.

8 ಆತನೇ ನೀತಿಗನುಸಾರವಾಗಿ ಲೋಕಕ್ಕೆ ನ್ಯಾಯ ತೀರಿಸುವವನು;

ಆತನು ಜನಾಂಗಗಳಿಗೆ ಸತ್ಯಕ್ಕನುಸಾರವಾಗಿ ತೀರ್ಪುಕೊಡುವನು.

9 ಯೆಹೋವನು ಕುಗ್ಗಿದವರಿಗೆ ಆಶ್ರಯವೂ,

ಆಪತ್ಕಾಲದಲ್ಲಿ ದುರ್ಗವೂ ಆಗಿರುವನು.

10 ಯೆಹೋವನೇ, ನಿನ್ನ ನಾಮಮಹಿಮೆಯನ್ನು ಬಲ್ಲವರು

ನಿನ್ನಲ್ಲಿ ಭರವಸವಿಡುವರು;

ಏಕೆಂದರೆ ನಿನ್ನ ಮೊರೆಹೋಗುವವರನ್ನು ನೀನು ಕೈಬಿಡುವವನಲ್ಲ.

11 ಚೀಯೋನಿನಲ್ಲಿ ವಾಸಿಸುವ ಯೆಹೋವನನ್ನು ಕೀರ್ತಿಸಿರಿ;

ಆತನ ಮಹತ್ಕಾರ್ಯಗಳನ್ನು ಜನಾಂಗಗಳಲ್ಲಿ ಪ್ರಕಟಿಸಿರಿ.

12 ಆತನು ಕುಗ್ಗಿದವರ ಮೊರೆಯನ್ನು ಮರೆಯದೆ

ಪ್ರಾಣಾಪರಾಧಕ್ಕೆ ಮುಯ್ಯಿತೀರಿಸುವವನಾಗಿ ಅವರನ್ನು ಜ್ಞಾಪಕಮಾಡಿಕೊಳ್ಳುವನು.

13 ಯೆಹೋವನೇ, ಮರಣದ್ವಾರದೊಳಗೆ ಸೇರದಂತೆ;

ನನ್ನನ್ನು ಉದ್ಧರಿಸುವವನೇ, ಕನಿಕರಿಸು;

ಹಗೆಗಳಿಂದ ನನಗುಂಟಾದ ಬಾಧೆಯನ್ನು ಲಕ್ಷ್ಯಕ್ಕೆ ತಂದುಕೋ.

14 ಆಗ ನಾನು ನಿನ್ನ ಸ್ತೋತ್ರವನ್ನು ಪ್ರಸಿದ್ಧಪಡಿಸುವೆನು;

ನಿನ್ನಿಂದಾದ ರಕ್ಷಣೆಗಾಗಿ ಚೀಯೋನೆಂಬ ಕುಮಾರಿಯ ಬಾಗಿಲುಗಳಲ್ಲಿ ಹರ್ಷಿಸುವೆನು.

15 ಜನಾಂಗಗಳವರು ತಾವು ಮಾಡಿದ ಕುಣಿಯಲ್ಲಿ ತಾವೇ ಬಿದ್ದು ಹೋದರು;

ಅವರು ಹಾಸಿದ ಬಲೆಯಲ್ಲಿ ಅವರ ಕಾಲೇ ಸಿಕ್ಕಿಕೊಂಡಿತು.

16 ಯೆಹೋವನು ನ್ಯಾಯತೀರಿಸುವವನಾಗಿ ತನ್ನನ್ನು ಪ್ರಕಟಿಸಿಕೊಂಡಿದ್ದಾನೆ;

ದುಷ್ಟರು ತಾವೇ ಕಲ್ಪಿಸಿದ ಕುಯುಕ್ತಿಯಲ್ಲಿ ಸಿಕ್ಕಿಕೊಂಡಿದ್ದಾರಲ್ಲಾ. ಹಿಗ್ಗಾಯೋನ್ ಸೆಲಾ

17 ದುಷ್ಟರು ಅಂದರೆ ದೇವರನ್ನು ಅಲಕ್ಷ್ಯಮಾಡುವ ಜನಾಂಗಗಳವರೆಲ್ಲಾ

ಪಾತಾಳಕ್ಕೆ ಇಳಿದುಹೋಗುವರು.

18 ದಿಕ್ಕಿಲ್ಲದವರು ಕಡೆಯವರೆಗೆ ಮರೆಯಲ್ಪಡುವುದಿಲ್ಲ;

ದೀನರ ನಿರೀಕ್ಷೆಯು ಕೆಡುವುದೇ ಇಲ್ಲ.

19 ಯೆಹೋವನೇ, ಏಳು; ಮನುಷ್ಯಮಾತ್ರದವರು ಬಲಗೊಳ್ಳಬಾರದು.

ಜನಾಂಗಗಳಿಗೆ ನಿನ್ನ ಸನ್ನಿಧಿಯಲ್ಲಿ ತೀರ್ಪು ಉಂಟಾಗಲಿ.

20 ಯೆಹೋವನೇ, ಅವರಿಗೆ ಭಯವನ್ನು ಹುಟ್ಟಿಸು;

ಜನಾಂಗಗಳು ತಾವು ಮನುಷ್ಯಮಾತ್ರದವರೆಂದು ತಿಳಿದುಕೊಳ್ಳಲಿ. ಸೆಲಾ.

Veja também

Publicidade
Bíblia Online Bíblia Online

Bíblia Online • Versão: 2026-06-15_21-32-39-