Publicidade

Salmos 5

ಭಕ್ತ ರಕ್ಷಕನಾದ ಯೆಹೋವನಿಗೆ ಉದಯಕೀರ್ತನೆ
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ರಂಧ್ರವಾದ್ಯದೊಡನೆ ಹಾಡತಕ್ಕ ದಾವೀದನ ಕೀರ್ತನೆ.

1 ಯೆಹೋವನೇ ನನ್ನ ಮೊರೆಗೆ ಕಿವಿಗೊಡು;

ನನ್ನ ನರಳಾಟವನ್ನು ಲಕ್ಷ್ಯಕ್ಕೆ ತಂದುಕೋ.

2 ನನ್ನ ಅರಸನೇ, ನನ್ನ ದೇವರೇ, ನಿನ್ನನ್ನೇ ಪ್ರಾರ್ಥಿಸುವೆನು;

ನನ್ನ ಮೊರೆಯನ್ನು ಆಲಿಸು.

3 ಯೆಹೋವನೇ, ಉದಯಕಾಲದಲ್ಲಿ ನನ್ನ ಸ್ವರವು ನಿನಗೆ ಕೇಳಿಸುವುದು;

ಉದಯಕಾಲದಲ್ಲಿಯೇ ನನ್ನ ಪ್ರಾರ್ಥನೆಯನ್ನು ನಿನಗೆ ಸಮರ್ಪಿಸಿ,

ನಿನ್ನಿಂದ ಸದುತ್ತರವನ್ನು ಎದುರುನೋಡುತ್ತಿರುವೆನು.

4 ನೀನು ದುಷ್ಟತ್ವದಲ್ಲಿ ಸಂತೋಷಿಸುವ ದೇವರಲ್ಲ;

ಕೆಟ್ಟದ್ದು ನಿನ್ನ ಬಳಿಯಲ್ಲಿ ತಂಗಲಾರದು.

5 ಸೊಕ್ಕಿನವರು ನಿನ್ನ ಸನ್ನಿಧಿಯಲ್ಲಿ ನಿಲ್ಲಲಾರರು;

ಅಧರ್ಮಿಗಳೆಲ್ಲರನ್ನು ನೀನು ಹಗೆಮಾಡುವಿ.

6 ಸುಳ್ಳು ಹೇಳುವವರನ್ನು ನಾಶಮಾಡುವಿ;

ಯೆಹೋವನೇ, ನರಹತ್ಯ ಮಾಡುವವರು ಮತ್ತು ಕಪಟಿಗಳು ನಿನಗೆ ಅಸಹ್ಯರಾಗಿದ್ದಾರೆ.

7 ನಾನಂತು ನಿನ್ನ ಮಹಾಕೃಪೆಯನ್ನು ಹೊಂದಿದವನಾಗಿ

ನಿನ್ನ ಮಂದಿರದೊಳಕ್ಕೆ ಪ್ರವೇಶಿಸುವೆನು;

ನಿನ್ನಲ್ಲಿಯೇ ಭಯಭಕ್ತಿಯುಳ್ಳವನಾಗಿ,

ನಿನ್ನ ಪರಿಶುದ್ಧ ಆಲಯದ ಕಡೆಗೆ ಅಡ್ಡಬೀಳುವೆನು.

8 ಯೆಹೋವನೇ, ವಿರೋಧಿಗಳು ನನಗೆ ಕೇಡನ್ನೇ ಹಾರೈಸುತ್ತಿರುವುದರಿಂದ

ನಿನ್ನ ನೀತಿಗೆ ಸರಿಯಾಗಿ ನನ್ನನ್ನು ನಡೆಸು;

ನನ್ನ ಮುಂದೆ ನಿನ್ನ ಮಾರ್ಗವನ್ನು ಸರಾಗಮಾಡು.

9 ಅವರ ಬಾಯಲ್ಲಿ ಯಥಾರ್ಥತ್ವವಿಲ್ಲ;

ಅವರು ನಾಲಿಗೆಯಿಂದ ಸವಿಮಾತನಾಡಿದರೂ,

ಅವರ ಹೃದಯವು ನಾಶಕರವಾದ ಗುಂಡಿ,

ಅವರ ಗಂಟಲು ತೆರೆದಿರುವ ಸಮಾಧಿ.

10 ದೇವರೇ, ಅವರು ನಿನಗೆ ವಿರುದ್ಧವಾಗಿ ತಿರುಗಿಬಿದ್ದವರು;

ಆದುದರಿಂದ ಅವರನ್ನು ಅಪರಾಧಿಗಳೆಂದು ನಿರ್ಣಯಿಸು;

ಅವರು ತಮ್ಮ ಕುಯುಕ್ತಿಯಿಂದಲೇ ಮೋಸ ಹೋಗಲಿ;

ಅವರ ದ್ರೋಹವು ಅಪಾರವಾಗಿರುವುದರಿಂದ ಅವರನ್ನು ತಳ್ಳಿಬಿಡು.

11 ನಿನ್ನನ್ನು ಮೊರೆಹೊಕ್ಕವರೆಲ್ಲರು ನಿನ್ನಲ್ಲಿ ಸಂತೋಷಪಡುವರು;

ನೀನು ಕಾಪಾಡುವವನೆಂದು ಅವರು ಯಾವಾಗಲೂ ಆನಂದ ಧ್ವನಿಮಾಡುವರು.

ನಿನ್ನ ನಾಮವನ್ನು ಪ್ರೀತಿಸುವವರು ನಿನ್ನಲ್ಲಿ ಉಲ್ಲಾಸಗೊಳ್ಳುವರು.

12 ಯೆಹೋವನೇ, ನೀತಿವಂತನನ್ನು ಆಶೀರ್ವದಿಸುವವನು ನೀನೇ;

ನಿನ್ನ ದಯವು ದೊಡ್ಡ ಗುರಾಣಿಯಂತೆ ಅವನನ್ನು ಆವರಿಸಿಕೊಳ್ಳುವುದು.

Veja também

Publicidade
Bíblia Online Bíblia Online

Bíblia Online • Versão: 2026-06-15_21-32-39-