Publicidade

Salmos 34

ಯೆಹೋವನು ಸದಾ ಭಕ್ತಪಾಲಕನೆಂದು ವರ್ಣಿಸುವ ಇಬ್ರಿಯ ಅಕ್ಷರಕ್ರಮಾನುಸಾರವಾದ ಕೀರ್ತನೆ
ದಾವೀದನು ಅಬೀಮೆಲೆಕನ ಎದುರಿನಲ್ಲಿ ಹುಚ್ಚನಂತೆ ತೋರ್ಪಡಿಸಿಕೊಂಡು ಅವನ ಬಳಿಯಿಂದ ಹೊರಟಾಗ ರಚಿಸಿದ ಕೀರ್ತನೆ.

1 ನಾನು ಯೆಹೋವನನ್ನು ಎಡೆಬಿಡದೆ ಕೊಂಡಾಡುವೆನು;

ಆತನ ಸ್ತೋತ್ರವು ಯಾವಾಗಲೂ ನನ್ನ ಬಾಯಲ್ಲಿ ಇರುವುದು.

2 ನನ್ನ ಮನಸ್ಸು ಯೆಹೋವನಲ್ಲಿ ಹಿಗ್ಗುತ್ತಿರುವುದು;

ಇದನ್ನು ದೀನರು ಕೇಳಿ ಸಂತೋಷಿಸುವರು.

3 ನನ್ನೊಡನೆ ಯೆಹೋವನನ್ನು ಕೊಂಡಾಡಿರಿ;

ನಾವು ಒಟ್ಟಾಗಿ ಆತನ ಹೆಸರನ್ನು ಘನಪಡಿಸೋಣ.

4 ನಾನು ಯೆಹೋವನ ಸನ್ನಿಧಿಯಲ್ಲಿ ಬೇಡಿಕೊಳ್ಳಲು,

ಆತನು ಸದುತ್ತರವನ್ನು ಕೊಟ್ಟು ಎಲ್ಲಾ ಭೀತಿಯಿಂದ ನನ್ನನ್ನು ತಪ್ಪಿಸಿದನು.

5 ಆತನನ್ನೇ ದೃಷ್ಟಿಸಿದವರು ಪ್ರಕಾಶವನ್ನು ಹೊಂದಿದರು;

ಅವರ ಮುಖವು ಅವಮಾನಕ್ಕೆ ಈಡಾಗುವುದೇ ಇಲ್ಲ.

6 ಕಷ್ಟದಲ್ಲಿದ್ದ ಈ ಮನುಷ್ಯನು ಮೊರೆಯಿಡಲು,

ಯೆಹೋವನು ಕೇಳಿ ಎಲ್ಲಾ ಬಾಧೆಗಳಿಂದ ಬಿಡಿಸಿದನು.

7 ಯೆಹೋವನ ಭಯಭಕ್ತಿಯುಳ್ಳವರ ಸುತ್ತಲು,

ಆತನ ದೂತನು ದಂಡಿಳಿಸಿ, ಕಾವಲಾಗಿದ್ದು ಕಾಪಾಡುತ್ತಾನೆ.

8 ಯೆಹೋವನು ಸರ್ವೋತ್ತಮನೆಂದು ಅನುಭವದಿಂದ ತಿಳಿದುಕೊಳ್ಳಿರಿ;

ಆತನನ್ನು ಆಶ್ರಯಿಸಿಕೊಂಡವರು ಎಷ್ಟೋ ಧನ್ಯರು.

9 ಯೆಹೋವನ ಜನರೇ, ಆತನಲ್ಲಿ ಭಯಭಕ್ತಿಯುಳ್ಳವರಾಗಿರಿ;

ಆತನಲ್ಲಿ ಭಯಭಕ್ತಿಯುಳ್ಳವರಿಗೆ ಯಾವ ಕೊರತೆಯೂ ಇರುವುದಿಲ್ಲ.

10 ಪ್ರಾಯದ ಸಿಂಹಗಳಾದರೋ ಹೊಟ್ಟೆಗಿಲ್ಲದೆ ಹಸಿದಾವು;

ಯೆಹೋವನ ಸನ್ನಿಧಿಯಲ್ಲಿ ಬೇಡಿಕೊಳ್ಳುವವರಿಗೆ ಯಾವ ಒಳಿತಿಗೆ ಕೊರತೆಯಿಲ್ಲ.

11 ಮಕ್ಕಳಿರಾ, ಬನ್ನಿರಿ, ನನ್ನ ಮಾತನ್ನು ಕೇಳಿರಿ;

ನಾನು ಯೆಹೋವನ ಭಯವನ್ನು ನಿಮಗೆ ಕಲಿಸುವೆನು.

12 ದೀರ್ಘಾಯುಷ್ಯವು ಬೇಕೋ?

ಬಹುದಿನ ಬದುಕಿ ಸುಖವನ್ನು ಅನುಭವಿಸಬೇಕೋ?

13 ಹಾಗಾದರೆ ಕೆಟ್ಟದ್ದಕ್ಕೆ ಹೋಗದಂತೆ ನಾಲಿಗೆಯನ್ನು ಕಾದುಕೋ;

ವಂಚನೆಯ ಮಾತುಗಳಿಗೆ ಬಿಡದೆ ತುಟಿಗಳನ್ನು ಇಟ್ಟುಕೋ.

14 ಕೆಟ್ಟದ್ದನ್ನು ಬಿಟ್ಟು ಒಳ್ಳೆಯದನ್ನೇ ಮಾಡು;

ಸಮಾಧಾನವನ್ನು ಹಾರೈಸಿ ಅದಕ್ಕಾಗಿ ಪ್ರಯತ್ನಪಡು.

15 ಯೆಹೋವನು ನೀತಿವಂತರನ್ನು ಕಟಾಕ್ಷಿಸುತ್ತಾನೆ;

ಅವರು ಮೊರೆಯಿಡುವಾಗ ಕಿವಿಗೊಡುತ್ತಾನೆ.

16 ಕೆಡುಕರಿಗೋ ಯೆಹೋವನು ಕೋಪದ ಮುಖವುಳ್ಳವನಾಗಿರುವನು;

ಲೋಕದಲ್ಲಿ ಅವರ ನೆನಪೇ ಉಳಿಯದಂತೆ ತೆಗೆದುಹಾಕುವನು.

17 ಯೆಹೋವನು ನೀತಿವಂತರ ಕೂಗನ್ನು ಕೇಳಿ,

ಎಲ್ಲಾ ಕಷ್ಟಗಳಿಂದ ಅವರನ್ನು ಬಿಡಿಸುತ್ತಾನೆ.

18 ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ;

ಕುಗ್ಗಿಹೋದವರನ್ನು ಉದ್ಧಾರಮಾಡುತ್ತಾನೆ.

19 ನೀತಿವಂತನಿಗೆ ಸಂಭವಿಸುವ ಕಷ್ಟಗಳು ಅನೇಕವಿದ್ದರೂ,

ಯೆಹೋವನು ಅವೆಲ್ಲವುಗಳಿಂದ ಅವನನ್ನು ಬಿಡಿಸುತ್ತಾನೆ.

20 ಆತನು ಅವನ ಎಲುಬುಗಳನ್ನೆಲ್ಲಾ ಕಾಪಾಡುತ್ತಾನೆ;

ಅವುಗಳಲ್ಲಿ ಒಂದಾದರೂ ಮುರಿದುಹೋಗುವುದಿಲ್ಲ.

21 ದುಷ್ಟನ ಕೆಡುಕು ಅವನನ್ನೇ ಕೊಲ್ಲುವುದು;

ನೀತಿವಂತನನ್ನು ದ್ವೇಷಿಸುವವರು ಅಪರಾಧಿಗಳೆಂದು ಎಣಿಸಲ್ಪಡುವರು.

22 ಯೆಹೋವನು ತನ್ನ ಸೇವಕರ ಪ್ರಾಣವನ್ನು ವಿಮೋಚಿಸುತ್ತಾನೆ.

ಆತನ ಆಶ್ರಿತರಲ್ಲಿ ಒಬ್ಬರಾದರೂ ಅಪರಾಧಿಯೆಂದು ಎಣಿಸಲ್ಪಡುವುದಿಲ್ಲ.

Veja também

Publicidade
Bíblia Online Bíblia Online

Bíblia Online • Versão: 2026-06-15_21-32-39-