Publicidade

Salmos 17

ಶತ್ರುಗಳಿಂದ ಕಾಪಾಡಬೇಕೆಂಬ ನಿರಪರಾಧಿಯ ಬೇಡಿಕೆ
ದಾವೀದನ ಪ್ರಾರ್ಥನೆ.

1 ಯೆಹೋವನೇ, ನ್ಯಾಯವಾದುದನ್ನು ಆಲೈಸು;

ನನ್ನ ಮೊರೆಗೆ ಲಕ್ಷ್ಯವಿಡು. ನನ್ನ ಪ್ರಾರ್ಥನೆಗೆ ಕಿವಿಗೊಡು;

ಅದು ಕಪಟವಾದ ಬಾಯಿಂದ ಬಂದದ್ದಲ್ಲ.

2 ನಿನ್ನಿಂದ ನನಗೆ ನ್ಯಾಯವಾದ ತೀರ್ಪು ಉಂಟಾಗಲಿ;

ನೀನು ನೀತಿಗನುಸಾರವಾಗಿ ನೋಡುವವನಲ್ಲವೇ.

3 ನೀನು ನನ್ನ ಹೃದಯವನ್ನು ಪರೀಕ್ಷಿಸಿದರೂ, ರಾತ್ರಿಯ ವೇಳೆ ವಿಚಾರಿಸಿದರೂ,

ನನ್ನನ್ನು ಪುಟಕ್ಕೆ ಹಾಕಿ ಶೋಧಿಸಿದರೂ,

ಯಾವ ದುರಾಲೋಚನೆಯಾದರೂ ನನ್ನಲ್ಲಿ ದೊರೆಯುವುದಿಲ್ಲ;

ನನ್ನ ಬಾಯಿ ಮಾತುಗಳಲ್ಲಿ ತಪ್ಪುವುದಿಲ್ಲ ಎಂದು ತೀರ್ಮಾನಿಸಿದ್ದೇನೆ.

4 ನಾನಂತೂ ಲೋಕವ್ಯವಹಾರಗಳಲ್ಲಿ ಬಲಾತ್ಕಾರಿಗಳಂತೆ ನಡೆಯದೆ

ನಿನ್ನ ಮಾತನ್ನೇ ಅನುಸರಿಸಿದ್ದೇನೆ.

5 ನಿನ್ನ ಮಾರ್ಗದಲ್ಲೇ ಹೆಜ್ಜೆಯಿಟ್ಟು ನಡೆಯುತ್ತಾ ಇದ್ದೇನೆ;

ನನ್ನ ಕಾಲು ಜಾರಲಿಲ್ಲ.

6 ದೇವರೇ, ನನಗೆ ಸದುತ್ತರವನ್ನು ದಯಪಾಲಿಸುವಿಯೆಂದು ಮೊರೆಯಿಡುತ್ತೇನೆ,

ಕಿವಿಗೊಟ್ಟು ಕೇಳು.

7 ಭುಜಬಲವನ್ನು ಪ್ರಯೋಗಿಸಿ,

ಶರಣಾಗತರನ್ನು ವಿರೋಧಿಗಳಿಂದ ರಕ್ಷಿಸುವಾತನೇ,

ನಿನ್ನ ಪ್ರೀತಿಯನ್ನು ವಿಶೇಷವಾಗಿ ತೋರಿಸು.

8 ನನ್ನನ್ನು ಸುತ್ತಿಕೊಂಡು ಬಾಧಿಸುತ್ತಿರುವ ದುಷ್ಟರಿಂದಲೂ,

ಪ್ರಾಣವೈರಿಗಳಿಂದಲೂ ತಪ್ಪಿಸಿದ್ದಿ.

9 ನಿನ್ನ ರೆಕ್ಕೆಗಳ ಮರೆಯಲ್ಲಿಟ್ಟುಕೊಂಡು ನನ್ನನ್ನು ದುಷ್ಟರಿಂದ ಕಾಯಿ;

ಕಣ್ಣು ಗುಡ್ಡಿನಂತೆಯೇ ಕಾಪಾಡು.

10 ಅವರು ತಮ್ಮ ಹೃದಯವನ್ನು ಕಠಿಣಮಾಡಿದ್ದಾರೆ;

ಅಹಂಕಾರದಿಂದ ಮಾತನಾಡುತ್ತಾರೆ.

11 ನಾವು ಎಲ್ಲಿ ಕಾಲಿಟ್ಟರೂ ಅಲ್ಲೆಲ್ಲಾ ನಮ್ಮನ್ನು ಸುತ್ತಿಕೊಳ್ಳುತ್ತಾರೆ;

ನಮ್ಮನ್ನು ನೆಲಕ್ಕೆ ಬೀಳಿಸಬೇಕೆಂದು ಸಮಯನೋಡುತ್ತಾರೆ.

12 ನನ್ನ ಶತ್ರುವು ಸೀಳಿಬಿಡಲಾಶಿಸುವ ಸಿಂಹದಂತೆಯೂ,

ಮರೆಯಲ್ಲಿ ಹೊಂಚುಹಾಕಿರುವ ಪ್ರಾಯದ ಸಿಂಹದಂತೆಯೂ ಇದ್ದಾನೆ.

13 ಯೆಹೋವನೇ, ನೀನು ಅವನಿಗೆ ಎದುರಾಗಿ ನಿಂತು ಅವನನ್ನು ಕೆಡವಿಬಿಡು;

ನಿನ್ನ ಕತ್ತಿಯಿಂದ ನನ್ನ ಪ್ರಾಣವನ್ನು ದುಷ್ಟರಿಗೆ ತಪ್ಪಿಸಿ ಕಾಪಾಡು.

14 ಯೆಹೋವನೇ, ಇಹಲೋಕವೇ ತಮ್ಮ ಪಾಲೆಂದು

ನಂಬಿದ ನರರಿಗೆ ಸಿಕ್ಕದಂತೆ ನಿನ್ನ ಕೈಯಿಂದ ನನ್ನನ್ನು ತಪ್ಪಿಸು;

ನಿನ್ನ ಐಶ್ವರ್ಯದಿಂದ ಅವರ ಹೊಟ್ಟೆಯನ್ನು ತುಂಬಿಸಿದ್ದೀಯಲ್ಲಾ.

ಅವರು ಸಂತಾನವೃದ್ಧಿಹೊಂದಿ ಉಳಿದ ಆಸ್ತಿಯನ್ನು ತಮ್ಮ ಮಕ್ಕಳಿಗೆ ಬಿಡುತ್ತಾರೆ.

15 ನಾನಾದರೋ ನಿರಪರಾಧಿಯು; ನಿನ್ನ ಸಾನ್ನಿಧ್ಯವನ್ನು ಸೇರುವೆನು.

ನಾನು ಎಚ್ಚತ್ತಾಗ ನಿನ್ನ ನೀತಿಸ್ವರೂಪ ದರ್ಶನದಿಂದ ತೃಪ್ತನಾಗಿರುವೆನು.

Veja também

Publicidade
Bíblia Online Bíblia Online

Bíblia Online • Versão: 2026-06-18_09-43-29-