Publicidade

Salmos 38

ದುರವಸ್ಥೆಯಲ್ಲಿರುವ ಭಕ್ತನು ದೇವರ ಸಹಾಯವನ್ನು ಬೇಡಿಕೊಳ್ಳುವುದು
ದಾವೀದನ ಕೀರ್ತನೆ; ಜ್ಞಾಪಕಾರ್ಥ ನೈವೇದ್ಯಸಮರ್ಪಣೆಯಲ್ಲಿ ಹಾಡತಕ್ಕದ್ದು.

1 ಯೆಹೋವನೇ, ಕೋಪದಿಂದ ನನ್ನನ್ನು ಶಿಕ್ಷಿಸಬೇಡ;

ರೋಷದಿಂದ ನನ್ನನ್ನು ದಂಡಿಸಬೇಡ.

2 ನಿನ್ನ ಬಾಣಗಳು ನನ್ನೊಳಗೆ ಹೊಕ್ಕಿವೆ;

ನಿನ್ನ ಶಿಕ್ಷಾಹಸ್ತವು ನನ್ನ ಮೇಲೆ ಭಾರವಾಗಿದೆ.

3 ನಿನ್ನ ಸಿಟ್ಟಿನಿಂದ ನನ್ನ ಶರೀರದಲ್ಲಿ ಸ್ವಸ್ಥತೆ ತಪ್ಪಿ ಹೋಗಿದೆ;

ನನ್ನ ಪಾಪದಿಂದ ನನ್ನ ಎಲುಬುಗಳಲ್ಲಿ ಸ್ವಲ್ಪವೂ ಕ್ಷೇಮವಿಲ್ಲ.

4 ನನ್ನ ಅಪರಾಧಗಳು ನನ್ನನ್ನು ಮುಳುಗಿಸಿಬಿಟ್ಟಿವೆ;

ಅವು ಹೊರಲಾರದಷ್ಟು ಭಾರವಾದ ಹೊರೆಯಂತಿವೆ.

5 ನನ್ನ ಮೂರ್ಖತನದ ಫಲವಾದ ಬಾಸುಂಡೆಗಳು,

ಕೀವು ಸೋರಿ ದುರ್ವಾಸನೆಯಿಂದ ನಾರುತ್ತಿದೆ.

6 ನಾನು ಬಹಳವಾಗಿ ಬಾಗಿ ಕುಗ್ಗಿದ್ದೇನೆ;

ಯಾವಾಗಲೂ ದುಃಖದಿಂದ ವಿಕಾರಿಯಾಗಿ ಅಲೆಯುತ್ತೇನೆ.

7 ನನ್ನ ಸೊಂಟಕ್ಕೆ ಉರಿಬಡಿದಂತಿದೆ;

ನನ್ನ ದೇಹದಲ್ಲಿ ಸ್ವಲ್ಪವಾದರೂ ಕ್ಷೇಮವಿಲ್ಲ.

8 ನನಗೆ ಜೋಮುಹಿಡಿದಂತಿದೆ;

ಬಹಳ ಮನಗುಂದಿದವನಾದೆನು.

ಹೃದಯದ ಸಂಕಟದ ದೆಸೆಯಿಂದ ಅರಚಿಕೊಳ್ಳುತ್ತಾ ಇದ್ದೇನೆ.

9 ಕರ್ತನೇ, ನನ್ನ ಅಪೇಕ್ಷೆ ನಿನಗೆ ಗೊತ್ತುಂಟು;

ನನ್ನ ನಿಟ್ಟುಸಿರು ನಿನಗೆ ಮರೆಯಾಗಿಲ್ಲ.

10 ನನ್ನ ಹೃದಯವು ಬಡಿದುಕೊಳ್ಳುತ್ತಿದೆ;

ನನ್ನ ಚೈತನ್ಯವು ಕುಗ್ಗಿಹೋಯಿತು;

ನನ್ನ ಕಣ್ಣುಗಳೂ ಮೊಬ್ಬಾಗಿ ಹೋದವು.

11 ನನ್ನ ಆಪ್ತಸ್ನೇಹಿತರು ಮತ್ತು ಜೊತೆಗಾರರು,

ನನ್ನ ರೋಗವನ್ನು ನೋಡಿ ಓರೆಯಾಗಿ ಹೋಗುತ್ತಾರೆ;

ನನ್ನ ಬಂಧುಗಳು ದೂರ ನಿಲ್ಲುತ್ತಾರೆ.

12 ನನ್ನ ಪ್ರಾಣವನ್ನು ತೆಗೆಯಬೇಕೆನ್ನುವವರು ನನಗೆ ಉರುಲುಗಳನ್ನು ಒಡ್ಡಿದ್ದಾರೆ;

ನನ್ನ ವಿಪತ್ತನ್ನು ಕೋರುವವರು ನನಗೆ ನಾಶನವನ್ನೇ ನಿಶ್ಚಯಿಸಿಕೊಂಡು,

ಯಾವಾಗಲೂ ಮೋಸವನ್ನು ಕಲ್ಪಿಸುತ್ತಿದ್ದಾರೆ.

13 ನಾನಂತೂ ಕಿವುಡನಂತೆ ಕೇಳದವನಾಗಿದ್ದೇನೆ;

ಮೂಕನಂತೆ ಬಾಯಿ ತೆರೆಯುವುದೇ ಇಲ್ಲ.

14 ನಾನು ಕಿವಿ ಕೇಳಿಸದವನಂತೆಯೂ,

ಪ್ರತ್ಯುತ್ತರ ಕೊಡಲಾರದವನಂತೆಯೂ ಆದೆನು.

15 ಯೆಹೋವನೇ, ನಿನ್ನನ್ನೇ ನಿರೀಕ್ಷಿಸಿಕೊಂಡಿದ್ದೇನೆ;

ನನ್ನ ಕರ್ತನೇ, ನನ್ನ ದೇವರೇ, ನೀನೇ ಸದುತ್ತರವನ್ನು ಕೊಡುವವನು.

16 "ನನ್ನ ವಿಷಯದಲ್ಲಿ ಶತ್ರುಗಳಿಗೆ ಸಂತೋಷವಾಗಬಾರದು;

ನಾನು ಜಾರಿಬಿದ್ದರೆ ಹಿಗ್ಗಬಾರದು" ಅಂದುಕೊಂಡೆನು.

17 ನನಗೆ ಆಪತ್ತೇ ಸಿದ್ಧವಾಗಿದೆ;

ಯಾವಾಗಲೂ ನನಗೆ ಸಂಕಟವಿದೆ.

18 ನಾನು ಅಪರಾಧಿಯೇ ಎಂದು ಒಪ್ಪಿಕೊಳ್ಳುತ್ತೇನೆ;

ನನ್ನ ಪಾಪದ ದೆಸೆಯಿಂದಲೇ ನನಗೆ ವ್ಯಸನವುಂಟಾಯಿತು.

19 ನನ್ನ ಶತ್ರುಗಳು ಚುರುಕಾದವರೂ, ಬಲಿಷ್ಠರೂ ಆಗಿದ್ದಾರೆ;

ನನ್ನನ್ನು ಅನ್ಯಾಯವಾಗಿ ದ್ವೇಷಿಸುವವರು ಬಹು ಜನ.

20 ನಾನು ಒಳ್ಳೆಯದನ್ನು ಅನುಸರಿಸುವುದರಿಂದ,

ನನ್ನ ಎದುರಾಳಿಗಳು ಉಪಕಾರಕ್ಕೆ ಪ್ರತಿಯಾಗಿ ಅಪಕಾರವನ್ನೇ ಸಲ್ಲಿಸುವರು.

21 ಯೆಹೋವನೇ, ಕೈ ಬಿಡಬೇಡ;

ನನ್ನ ದೇವರೇ, ದೂರವಾಗಿರಬೇಡ.

22 ನನ್ನ ಕರ್ತನೇ, ನನ್ನ ರಕ್ಷಕನೇ,

ಬೇಗ ಬಂದು ಸಹಾಯಮಾಡು.

Veja também

Publicidade
Bíblia Online Bíblia Online

Bíblia Online • Versão: 2026-06-18_10-32-54-