Publicidade

Salmos 50

ದೇವರು ಸದಾಚಾರವನ್ನೇ ಮೆಚ್ಚುವನು
ಆಸಾಫನ ಕೀರ್ತನೆ.

1 ಬಲಿಷ್ಠ ದೇವರಾದ ಯೆಹೋವನು

ಪೂರ್ವದಿಂದ ಪಶ್ಚಿಮ ದಿಕ್ಕಿನವರೆಗೂ ಇರುವ ಭೂನಿವಾಸಿಗಳೆಲ್ಲರನ್ನೂ,

ತನ್ನ ಸನ್ನಿಧಿಯಲ್ಲಿ ಬರಬೇಕೆಂದು ಕರೆಯುತ್ತಾನೆ.

2 ಅತ್ಯಂತ ರಮಣೀಯವಾದ ಚೀಯೋನಿನಲ್ಲಿರುವ,

ದೇವರು ಪ್ರಕಾಶಿಸುತ್ತಾನೆ.

3 ನಮ್ಮ ದೇವರು ಪ್ರತ್ಯಕ್ಷನಾಗುವನು,

ಎಷ್ಟು ಮಾತ್ರವೂ ಸುಮ್ಮನಿರುವುದಿಲ್ಲ;

ಆತನ ಮುಂಭಾಗದಲ್ಲಿ ಬೆಂಕಿ ಪ್ರಜ್ವಲಿಸುತ್ತದೆ;

ಆತನ ಸುತ್ತಲು ಬಿರುಗಾಳಿ ಬೀಸುತ್ತದೆ.

4 ಆತನು ತನ್ನ ಪ್ರಜೆಗಳ ನ್ಯಾಯವಿಚಾರಣೆಯಲ್ಲಿ ಭೂಮ್ಯಾಕಾಶಗಳನ್ನು

ಸಾಕ್ಷಿಗಳನ್ನಾಗಿ ನೇಮಿಸುತ್ತಾನೆ.

5 "ನನ್ನೊಡನೆ ಯಜ್ಞದ ಮೂಲಕ ಒಡಂಬಡಿಕೆಯನ್ನು ಮಾಡಿಕೊಂಡ ನನ್ನ ಭಕ್ತರನ್ನು

ನನ್ನ ಬಳಿಗೆ ಕರೆದುಕೊಂಡು ಬನ್ನಿರಿ" ಎಂದು ಆಜ್ಞಾಪಿಸುತ್ತಾನೆ.

6 ದೇವರು ತಾನೇ ನ್ಯಾಯಾಧಿಪತಿ;

ಆತನು ನೀತಿಸ್ವರೂಪನೆಂದು ಆಕಾಶಮಂಡಲವು ಘೋಷಿಸುತ್ತದೆ. ಸೆಲಾ

7 ಆತನು ಆಜ್ಞಾಪಿಸುವುದು ಏನೆಂದರೆ, "ಪ್ರಜೆಗಳಿರಾ, ಇಸ್ರಾಯೇಲ್ಯರೇ,

ದೇವರಾದ ನಾನೇ ನಿಮ್ಮ ದೇವರು;

ನಿಮಗೆ ಖಂಡಿತವಾಗಿ ಹೇಳುತ್ತೇನೆ" ಕೇಳಿರಿ.

8 ನಾನು ನಿಮ್ಮ ಯಜ್ಞದ ವಿಷಯದಲ್ಲಿ ತಪ್ಪೆಣಿಸುವುದಿಲ್ಲ;

ಸರ್ವಾಂಗಹೋಮಗಳನ್ನು ನೀವು ನಿತ್ಯವೂ ನನಗೆ ಸಮರ್ಪಿಸುತ್ತೀರಲ್ಲಾ.

9 ಆದರೂ ನಿಮ್ಮ ಮನೆಗಳಿಂದ ನನಗೆ ಹೋರಿ ಬೇಕಾಗಿಲ್ಲ;

ನಿಮ್ಮ ದೊಡ್ಡಿಗಳಿಂದ ಹೋತ ಬೇಕಿಲ್ಲ.

10 ಕಾಡಿನಲ್ಲಿರುವ ಸರ್ವಮೃಗಗಳೂ,

ಗುಡ್ಡಗಳಲ್ಲಿರುವ ಸಾವಿರಾರು ಪಶುಗಳೂ ನನ್ನವೇ.

11 ಬೆಟ್ಟಗಳ ಪಕ್ಷಿಗಳನ್ನೆಲ್ಲಾ ನಾನು ಬಲ್ಲೆ;

ಅಡವಿಯ ಜೀವಜಂತುಗಳೆಲ್ಲಾ ನನಗೆ ಗೊತ್ತುಂಟು.

12 ನನಗೆ ಹಸಿವೆಯಿದ್ದರೆ ನಿಮಗೆ ತಿಳಿಸುವುದಿಲ್ಲ;

ಏಕೆಂದರೆ ಲೋಕವೂ ಅದರಲ್ಲಿರುವುದೆಲ್ಲವೂ ನನ್ನದಲ್ಲವೇ.

13 ನಾನು ಹೋರಿಗಳ ಮಾಂಸವನ್ನು ತಿನ್ನುವುದೂ,

ಹೋತಗಳ ರಕ್ತವನ್ನು ಕುಡಿಯುವುದೂ ಉಂಟೇ?

14 ಸ್ತುತಿಯಜ್ಞವನ್ನೇ ದೇವರಿಗೆ ಸಮರ್ಪಿಸಿರಿ;

ವಾಗ್ದಾನ ಮಾಡಿದ ಹರಕೆಗಳನ್ನು ಪರಾತ್ಪರನಾದ ದೇವರಿಗೆ ಸಲ್ಲಿಸಿರಿ.

15 ಕಷ್ಟಕಾಲದಲ್ಲಿ ನನಗೆ ಮೊರೆಯಿಡಿರಿ, ಬಿಡಿಸುವೆನು;

ಆಗ ನನ್ನನ್ನು ಕೊಂಡಾಡುವಿರಿ.

16 ದುಷ್ಟರಿಗಾದರೋ ದೇವರು ಹೇಳುವುದು ಏನೆಂದರೆ,

"ನನ್ನ ವಿಧಿಗಳನ್ನು ಹೇಳುವುದಕ್ಕೆ ನಿಮಗೇನು ಬಾಧ್ಯತೆ ಉಂಟು?

ನನ್ನ ಒಡಂಬಡಿಕೆಯನ್ನು ನಿಮ್ಮ ಬಾಯಲ್ಲಿ ಉಚ್ಚರಿಸುವುದೇಕೆ?

17 ನೀವೋ ನನ್ನ ಸುಶಿಕ್ಷಣವನ್ನು ಹಗೆಮಾಡುತ್ತೀರಲ್ಲಾ;

ನನ್ನ ಆಜ್ಞೆಯನ್ನು ಉಲ್ಲಂಘಿಸುತ್ತೀರಿ.

18 ನೀವು ಕಳ್ಳರೊಡನೆ ಸೇರಿ ಅವರಿಗೆ ಸಮ್ಮತಿ ನೀಡುತ್ತೀರಿ;

ಜಾರರ ಒಡನಾಟದಲ್ಲಿ ನೀವು ಸಂತೋಷದಿಂದ ಇರುತ್ತೀರಿ.

19 ನಿಮ್ಮ ಬಾಯಿಯನ್ನು ಕೇಡಿಗೆ ಒಪ್ಪಿಸುತ್ತೀರಿ;

ನಾಲಿಗೆಯು ಮೋಸವನ್ನು ನೇಯುತ್ತದೆ.

20 ನೀವು ಕುಳಿತುಕೊಂಡು ನಿಮ್ಮ ಸಹೋದರರ ವಿರುದ್ಧವಾಗಿ ಮಾತನಾಡುತ್ತೀರಿ;

ನಿಮ್ಮ ಒಡಹುಟ್ಟಿದವರನ್ನು ದೂರುತ್ತೀರಿ.

21 ನೀವು ಹೀಗೆ ಮಾಡಿದರೂ ನಾನು ಮೌನವಾಗಿದ್ದೆನು.

ಆದುದರಿಂದ, ‘ದೇವರೂ ನಮ್ಮಂಥವನೇ’ ಎಂದು ತಿಳಿದುಕೊಂಡಿರಿ.

ಈಗಲಾದರೋ ನಾನು ಎಲ್ಲವನ್ನು,

ನಿಮ್ಮ ಮುಂದೆ ವಿವರಿಸಿ ನಿಮ್ಮನ್ನು ಅಪರಾಧಿಗಳೆಂದು ಸ್ಥಾಪಿಸುವೆನು.

22 ದೇವರನ್ನು ಬಿಟ್ಟವರೇ, ಇದನ್ನು ಮನದಟ್ಟು ಮಾಡಿಕೊಳ್ಳಿರಿ;

ಇಲ್ಲವಾದರೆ ನಿಮ್ಮನ್ನು ಹರಿದುಬಿಟ್ಟೇನು.

ನಿಮ್ಮನ್ನು ತಪ್ಪಿಸುವವರು ಯಾರೂ ಇರುವುದಿಲ್ಲ.

23 ಯಾರು ಸ್ತುತಿಯಜ್ಞವನ್ನು ಸಮರ್ಪಿಸುತ್ತಾರೋ ಅವರೇ ನನ್ನನ್ನು ಗೌರವಿಸುವವರು;

ತಮ್ಮ ನಡತೆಯನ್ನು ಸರಿಪಡಿಸಿಕೊಳ್ಳುವವರಿಗೆ ನನ್ನ ವಿಶೇಷವಾದ ರಕ್ಷಣೆಯನ್ನು ತೋರಿಸುವೆನು."

Veja também

Publicidade
Bíblia Online Bíblia Online

Bíblia Online • Versão: 2026-06-18_14-04-22-