Publicidade

Salmos 111

ದೇವಸ್ತುತಿ

1 ಯೆಹೋವನಿಗೆ ಸ್ತೋತ್ರ! ನಾನು ಯೆಹೋವನನ್ನು ಕೊಂಡಾಡುವೆನು;

ಯಥಾರ್ಥರ ಕೂಟದಲ್ಲಿಯೂ, ನೆರೆದ ಸಭೆಯಲ್ಲಿಯೂ,

ಮನಃಪೂರ್ವಕವಾಗಿ ಕೀರ್ತಿಸುವೆನು.

2 ಯೆಹೋವನ ಕೃತ್ಯಗಳು ಮಹತ್ತಾದವುಗಳು;

ಅವುಗಳಲ್ಲಿ ಸಂತೋಷಿಸುವವರು ಅವುಗಳನ್ನೇ ಧ್ಯಾನಿಸುವರು.

3 ಆತನ ಕಾರ್ಯವು ಘನ, ಮಾನಗಳುಳ್ಳದ್ದು;

ಆತನ ನೀತಿಯು ಸದಾಕಾಲವೂ ಇರುವುದು.

4 ಆತನು ತನ್ನ ಅದ್ಭುತಕೃತ್ಯಗಳ ಜ್ಞಾಪಕವನ್ನು ಉಳಿಯಮಾಡಿದ್ದಾನೆ.

ಯೆಹೋವನು ಕೃಪೆಯೂ, ಕನಿಕರವೂ ಉಳ್ಳವನು.

5 ತನ್ನಲ್ಲಿ ಭಯಭಕ್ತಿಯುಳ್ಳವರಿಗೆ ಆಹಾರವನ್ನು ಕೊಟ್ಟಿದ್ದಾನೆ;

ತನ್ನ ಒಡಂಬಡಿಕೆಯನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಂಡಿದ್ದಾನೆ

6 ಆತನು ಅನ್ಯಜನಗಳ ಸ್ವತ್ತನ್ನು ತನ್ನ ಪ್ರಜೆಗೆ ಕೊಡುವುದರ ಮೂಲಕ

ಸ್ವಪ್ರತಾಪವನ್ನು ತೋರ್ಪಡಿಸಿದ್ದಾನೆ.

7 ಆತನ ಕೈಕೆಲಸಗಳು ನೀತಿ, ಸತ್ಯತೆಗಳನ್ನು ಪ್ರಕಟಿಸುತ್ತವೆ;

ಆತನ ನಿಯಮಗಳೆಲ್ಲಾ ಸ್ಥಿರವಾಗಿವೆ.

8 ಅವು ದೃಢವಾದ ಆಧಾರವುಳ್ಳವುಗಳು; ಯುಗಯುಗಾಂತರಕ್ಕೂ ಇರುವವು.

ಸತ್ಯ, ನೀತಿಗಳಿಗನುಸಾರವಾಗಿ ವಿಧಿಸಲ್ಪಟ್ಟಿವೆ.

9 ಯೆಹೋವನು ತನ್ನ ಜನರಿಗೆ ವಿಮೋಚನೆಯನ್ನು ಉಂಟುಮಾಡಿದ್ದಾನೆ;

ತನ್ನ ಒಡಂಬಡಿಕೆಯನ್ನು ನಿತ್ಯಕ್ಕೂ ಸ್ಥಾಪಿಸಿದ್ದಾನೆ;

ಆತನ ನಾಮವು ಪರಿಶುದ್ಧವೂ, ಮಹೋನ್ನತವೂ ಆಗಿದೆ.

10 ಯೆಹೋವನ ಭಯವೇ ಜ್ಞಾನಕ್ಕೆ ಮೂಲ;

ಆತನ ಕಟ್ಟಳೆಗಳನ್ನು ಕೈಕೊಳ್ಳುವವರು ಪೂರ್ಣ ವಿವೇಕಿಗಳು.

ಆತನ ಸ್ತುತಿಯು ನಿರಂತರವಾದದ್ದು.

Veja também

Publicidade
Bíblia Online Bíblia Online

Bíblia Online • Versão: 2026-06-18_14-04-22-