Publicidade

Salmos 141

ಬಲಾತ್ಕಾರ ದುಷ್ಪ್ರೇರಣೆಗಳಿಂದ ತಪ್ಪಿಸಬೇಕೆಂಬ ಪ್ರಾರ್ಥನೆ
ದಾವೀದನ ಕೀರ್ತನೆ.

1 ಯೆಹೋವನೇ, ಮೊರೆಯಿಡುತ್ತೇನೆ,

ಬೇಗನೆ ಬಾ, ನಾನು ಮೊರೆಯಿಡುವಾಗ ನನ್ನ ಕೂಗನ್ನು ಲಾಲಿಸು.

2 ನನ್ನ ಪ್ರಾರ್ಥನೆಯು ಧೂಪದಂತೆಯೂ,

ನಾನು ಕೈಯೆತ್ತುವುದು ಸಂಧ್ಯಾನೈವೇದ್ಯದಂತೆಯೂ ನಿನಗೆ ಸಮರ್ಪಕವಾಗಲಿ.

3 ಯೆಹೋವನೇ, ನನ್ನ ಬಾಯಿಗೆ ಕಾವಲಿರಿಸು,

ನನ್ನ ತುಟಿಗಳೆಂಬ ಕದವನ್ನು ಕಾಯಿ.

4 ನನ್ನ ಹೃದಯವು ದುರಾಚಾರವನ್ನು ಮೆಚ್ಚದಂತೆಯೂ,

ನಾನು ದುಷ್ಟರೊಡನೆ ಸೇರಿ ಕೆಟ್ಟ ಕೆಲಸಗಳನ್ನು ನಡೆಸದಂತೆಯೂ ನನ್ನನ್ನು ಕಾಪಾಡು.

ಅವರ ಮೃಷ್ಟಾನ್ನವು ನನಗೆ ಬೇಡವೇ ಬೇಡ.

5 ನೀತಿವಂತರು ನನ್ನನ್ನು ಹೊಡೆಯಲಿ, ಅದು ನನಗೆ ಉಪಕಾರ,

ಅವರು ನನ್ನನ್ನು ಶಿಕ್ಷಿಸಲಿ, ಅದು ನನ್ನ ತಲೆಗೆ ಎಣ್ಣೆಯಂತಿದೆ,

ನನ್ನ ತಲೆಯು ಅದನ್ನು ಬೇಡವೆನ್ನದಿರಲಿ.

ಆದರೆ ದುಷ್ಟರ ಕೆಟ್ಟತನಕ್ಕೆ ವಿರುದ್ಧವಾಗಿ ದೇವರನ್ನು ಪ್ರಾರ್ಥಿಸುತ್ತಿರುವೆನು.

6 ಅವರ ಪ್ರಮುಖರು ಕಡುಬಂಡೆಯಿಂದ ಕೆಳಕ್ಕೆ ದೊಬ್ಬಲ್ಪಟ್ಟ ಮೇಲೆ,

ಜನರು ನನ್ನ ಮಾತುಗಳಿಗೆ ಕಿವಿಗೊಡುವರು,

ಅವು ಅವರಿಗೆ ಹಿತವಾಗಿರುವವು.

7 ಒಬ್ಬನು ಹೊಲವನ್ನು ಉಳುತ್ತಾ,

ಹೆಂಟೆಗಳನ್ನು ಒಡೆದು ಚದರಿಸುವ ಪ್ರಕಾರವೇ,

ನಮ್ಮ ಎಲುಬುಗಳು ಪಾತಾಳದ್ವಾರದಲ್ಲಿ ಚದರಿಸಲ್ಪಟ್ಟಿರುತ್ತವೆ.

8 ಕರ್ತನೇ, ಯೆಹೋವನೇ, ನನ್ನ ದೃಷ್ಟಿ ನಿನ್ನಲ್ಲಿದೆ,

ನಿನ್ನನ್ನು ಆಶ್ರಯಿಸಿಕೊಂಡಿದ್ದೇನೆ,

ನನ್ನ ಪ್ರಾಣವನ್ನು ಮರಣಕ್ಕೆ ಒಪ್ಪಿಸಬೇಡ.

9 ಕೆಡುಕರ ಉರುಲಿನಲ್ಲಿ ಸಿಕ್ಕಿಬೀಳದಂತೆ ನನ್ನನ್ನು ಕಾಪಾಡು,

ಅವರು ಬೀಸಿಟ್ಟಿರುವ ಬಲೆಯಿಂದ ನನ್ನನ್ನು ತಪ್ಪಿಸು.

10 ದುಷ್ಟರು ತಮ್ಮ ಬಲೆಯಲ್ಲಿ ತಾವೇ ಬಿದ್ದುಹೋಗಲಿ,

ಆಗ ನಾನು ತಪ್ಪಿಸಿಕೊಳ್ಳುವೆನು.

Veja também

Publicidade
Bíblia Online Bíblia Online

Bíblia Online • Versão: 2026-06-18_14-04-22-