Publicidade

Salmos 29

ಮೇಘಮಂಡಲದಲ್ಲಿ ಕಾಣಿಸುವ ಯೆಹೋವನ ಮಹಿಮೆ
ದಾವೀದನ ಕೀರ್ತನೆ.

1 ದೇವದೂತರುಗಳಿರಾ, ಪರಮಪ್ರಭಾವವು,

ಯೆಹೋವನದೇ, ಯೆಹೋವನದೇ ಎಂದು ಹೇಳಿ ಕೊಂಡಾಡಿರಿ.

2 ಯೆಹೋವನ ನಾಮಕ್ಕೆ ಯೋಗ್ಯವಾದ ಘನತೆಯನ್ನು ಸಲ್ಲಿಸಿರಿ;

ಪರಿಶುದ್ಧತ್ವವೆಂಬ ಭೂಷಣದೊಡನೆ ಯೆಹೋವನಿಗೆ ಅಡ್ಡಬೀಳಿರಿ.

3 ಯೆಹೋವನ ಮಹಾಧ್ವನಿಯು ಮೇಘಮಂಡಲದಲ್ಲಿ ಕೇಳಿಸುತ್ತದೆ;

ಪ್ರಭಾವಸ್ವರೂಪನಾದ ದೇವರು ಗುಡುಗುತ್ತಾನೆ;

ಯೆಹೋವನು ಆಕಾಶದ ಜಲರಾಶಿಗಳ ಮೇಲೆ ಇದ್ದಾನೆ.

4 ಯೆಹೋವನ ಧ್ವನಿಯು ಎಷ್ಟೋ ಬಲವುಳ್ಳದ್ದು,

ಎಷ್ಟೋ ಗಂಭೀರವಾದದ್ದು.

5 ಯೆಹೋವನ ಗರ್ಜನೆಗೆ ದೇವದಾರು ವೃಕ್ಷಗಳು ದಡಲ್ ಎಂದು ಮುರಿದು ಬೀಳುತ್ತವೆ;

ಯೆಹೋವನು ಲೆಬನೋನ್ ಪರ್ವತದಲ್ಲಿನ ಮಹಾದೇವದಾರುಗಳನ್ನೂ ಮುರಿದುಬಿಡುತ್ತಾನೆ.

6 ಲೆಬನೋನ್ ಪರ್ವತವು ಕರುವಿನೋಪಾದಿಯಲ್ಲಿಯೂ, ಸಿರ್ಯೋನ್ ಬೆಟ್ಟವು

ಕಾಡುಕೋಣದ ಮರಿಯಂತೆಯೂ ಹಾರಾಡುವ ಹಾಗೆ ಮಾಡುತ್ತಾನೆ.

7 ಯೆಹೋವನ ಗರ್ಜನೆಗೆ ಮಿಂಚುಗಳು

ಥಳಥಳನೆ ಹೊಳೆಯುತ್ತವೆ.

8 ಯೆಹೋವನ ಗರ್ಜನೆಗೆ ಕಾಡು ಹೊರಳಾಡುತ್ತದೆ;

ಕಾದೇಶ್ ಅರಣ್ಯವು ಕಂಪಿಸುತ್ತದೆ.

9 ಯೆಹೋವನ ಗರ್ಜನೆಯು ದೇವದಾರು ಮರಗಳನ್ನು ಕದಲಿಸುತ್ತದೆ;

ಕಾಡಿನ ಮರಗಳು ಬರಿದಾಗುತ್ತವೆ.

ಆಗ ಆತನ ಮಂದಿರದಲ್ಲಿರುವವರೆಲ್ಲರು, "ಎಷ್ಟೋ ಪ್ರಭಾವ!" ಎನ್ನುತ್ತಾರೆ.

10 ಯೆಹೋವನು ಜಲಪ್ರಳಯದಲ್ಲಿ ಆಸೀನನಾಗಿರುವನು;

ಆತನು ಸದಾಕಾಲವೂ ಅರಸನಾಗಿ ಕುಳಿತಿರುವನು.

11 ಯೆಹೋವನು ತನ್ನ ಜನರಿಗೆ ಬಲವನ್ನು ಅನುಗ್ರಹಿಸುವನು;

ಆತನು ತನ್ನ ಪ್ರಜೆಗೆ ಸುಕ್ಷೇಮವನ್ನು ದಯಪಾಲಿಸುವನು.

Veja também

Publicidade
Bíblia Online Bíblia Online

Bíblia Online • Versão: 2026-06-15_21-32-39-