Publicidade

Salmos 61

ಸದ್ಭಕ್ತರು ತಮಗಾಗಿಯೂ ತಮ್ಮ ರಾಜನಿಗಾಗಿಯೂ ಮಾಡುವ ವಿಜ್ಞಾಪನೆ
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ತಂತಿವಾದ್ಯದೊಡನೆ ಹಾಡತಕ್ಕದ್ದು; ದಾವೀದನ ಕೀರ್ತನೆ.

1 ದೇವರೇ, ನನ್ನ ಕೂಗನ್ನು ಕೇಳಿ ನನ್ನ ಪ್ರಾರ್ಥನೆಗೆ ಕಿವಿಗೊಡು.

2 ನಾನು ಎದೆಗುಂದಿದವನಾಗಿ ಭೂಮಿಯ ಕಡೆಯ ಭಾಗದಿಂದ ನಿನಗೆ ಮೊರೆಯಿಡುತ್ತೇನೆ;

ನಾನು ಹತ್ತಲಾರದ ಆಶ್ರಯಗಿರಿಯ ಮೇಲೆ ನನ್ನನ್ನು ಹತ್ತಿಸು.

3 ನೀನು ನನಗೆ ಶರಣನೂ,

ಶತ್ರುಗಳಿಂದ ತಪ್ಪಿಸುವ ಭದ್ರವಾದ ಬುರುಜು ಆಗಿದ್ದೀ.

4 ನನಗೆ ನಿರಂತರವೂ ನಿನ್ನ ಗುಡಾರದಲ್ಲಿ ಬಿಡಾರವಾಗಲಿ;

ನಿನ್ನ ರೆಕ್ಕೆಗಳ ಮರೆಯನ್ನು ಆಶ್ರಯಿಸಿಕೊಳ್ಳುವಂತೆ ಅನುಗ್ರಹಿಸು. ಸೆಲಾ

5 ದೇವರೇ, ನೀನು ನನ್ನ ಹರಕೆಗಳಿಗೆ ಲಕ್ಷ್ಯಕೊಟ್ಟಿದ್ದೀ;

ನಿನ್ನಲ್ಲಿ ಭಯಭಕ್ತಿಯುಳ್ಳವರಿಗೆ ಸಿಕ್ಕತಕ್ಕ ಬಾಧ್ಯತೆಯನ್ನು ನನಗೂ ದಯಪಾಲಿಸಿದ್ದೀ.

6 ಅರಸನು ದೀರ್ಘಕಾಲ ಬಾಳುವಂತೆ ಅನುಗ್ರಹಿಸು;

ಅವನ ಆಯಸ್ಸು ತಲತಲಾಂತರಗಳವರೆಗೆ ವೃದ್ಧಿಯಾಗಲಿ.

7 ಅವನು ನಿನ್ನ ಸಾನ್ನಿಧ್ಯವನ್ನು ಪಡೆದು,

ಸದಾಕಾಲವೂ ಸಿಂಹಾಸನಾರೂಢನಾಗಿರಲಿ;

ನಿನ್ನ ಪ್ರೇಮ ಮತ್ತು ಸತ್ಯತೆಗಳು ಅವನನ್ನು ಕಾಯಲಿ.

8 ಹೀಗಾದರೆ ನಾನು ಪ್ರತಿದಿನವೂ ನನ್ನ ಹರಕೆಗಳನ್ನು ಸಲ್ಲಿಸುವವನಾಗಿ,

ನಿನ್ನ ನಾಮವನ್ನು ಸದಾ ಸ್ಮರಿಸಿ ಕೀರ್ತಿಸುತ್ತಿರುವೆನು.

Veja também

Publicidade
Bíblia Online Bíblia Online

Bíblia Online • Versão: 2026-06-18_14-04-22-