Publicidade

Salmos 142

ಇಕ್ಕಟ್ಟಿನಲ್ಲಿದ್ದವನ ಪ್ರಾರ್ಥನೆ
ದಾವೀದನ ಪದ್ಯ, ಅವನು ಗುಹೆಯಲ್ಲಿ ಅಡಗಿಕೊಂಡಿದ್ದಾಗ ಮಾಡಿದ ಪ್ರಾರ್ಥನೆ.

1 ನಾನು ಯೆಹೋವನಿಗೆ ಮೊರೆಯಿಡುವೆನು,

ಯೆಹೋವನಿಗೆ ಕೂಗಿ ಬಿನ್ನೈಸುವೆನು.

2 ನನ್ನ ಚಿಂತೆಗಳನ್ನು ಆತನ ಮುಂದೆ ಬಿಚ್ಚುವೆನು,

ನನ್ನ ಕಷ್ಟವನ್ನು ಆತನಿಗೆ ಅರಿಕೆಮಾಡುವೆನು.

3 ನನ್ನ ಆತ್ಮವು ಕುಂದಿಹೋದಾಗ,

ನೀನು ನನ್ನ ಮಾರ್ಗವನ್ನು ಬಲ್ಲವನಾಗಿರುತ್ತಿ,

ನಾನು ಹೋಗಬೇಕಾದ ದಾರಿಯಲ್ಲಿ ಅವರು ಉರುಲನ್ನೊಡ್ಡಿದ್ದಾರೆ.

4 ನಾನು ನನ್ನ ಬಲಗಡೆಗೆ ನೋಡಲು,

ಅಲ್ಲಿ ಸಹಾಯಕರು ಯಾರೂ ಇಲ್ಲ,

ಆಶ್ರಯವೂ ನಾಶವಾಯಿತು,

ನನ್ನ ಪ್ರಾಣಕ್ಕೆ ಹಿತಚಿಂತಕರು ಒಬ್ಬರೂ ಇಲ್ಲ.

5 ಯೆಹೋವನೇ, ನಾನು ನಿನಗೆ, "ನೀನೇ ನನ್ನ ಶರಣನೂ,

ಜೀವಲೋಕದಲ್ಲಿ ನನ್ನ ಪಾಲೂ ಆಗಿದ್ದಿ" ಎಂದು ಕೂಗಿ ಮೊರೆಯಿಟ್ಟಿದ್ದೇನೆ.

6 ನನ್ನ ಕೂಗನ್ನು ಲಾಲಿಸು, ಬಲು ಕುಗ್ಗಿಹೋಗಿದ್ದೇನೆ.

ಹಿಂಸಕರ ಕೈಯಿಂದ ನನ್ನನ್ನು ತಪ್ಪಿಸು,

ಅವರು ನನಗಿಂತ ಬಲಿಷ್ಠರಾಗಿದ್ದಾರಲ್ಲಾ.

7 ಸೆರೆಯಿಂದ ನನ್ನನ್ನು ಬಿಡಿಸು,

ನಿನ್ನ ನಾಮವನ್ನು ಕೀರ್ತಿಸುವೆನು.

ನೀತಿವಂತರು ನಿನ್ನ ಮಹೋಪಕಾರಕ್ಕಾಗಿ,

ನನ್ನನ್ನು ಸುತ್ತಿಕೊಂಡು ಉತ್ಸಾಹಗೊಳ್ಳುವರು.

Veja também

Publicidade
Bíblia Online Bíblia Online

Bíblia Online • Versão: 2026-06-15_21-32-39-