Publicidade

Salmos 24

ಯೆಹೋವನ ಸನ್ನಿಧಿಯಲ್ಲಿ ಸೇರತಕ್ಕವರು
ದಾವೀದನ ಕೀರ್ತನೆ.

1 ಭೂಮಿಯೂ ಅದರಲ್ಲಿರುವ ಸಮಸ್ತವೂ ಯೆಹೋವನದು;

ಲೋಕವೂ ಮತ್ತು ಅದರ ನಿವಾಸಿಗಳೂ ಆತನವೇ.

2 ಆತನೇ ಅದರ ಅಸ್ತಿವಾರವನ್ನು ಸಾಗರದ ಮೇಲೆ ಹಾಕಿದವನು;

ಅದನ್ನು ಜಲರಾಶಿಗಳ ಮೇಲೆ ಸ್ಥಿರಪಡಿಸಿದವನು ಆತನೇ.

3 ಯೆಹೋವನ ಪರ್ವತವನ್ನು ಹತ್ತತಕ್ಕವನು ಯಾರು?

ಆತನ ಪವಿತ್ರಸ್ಥಾನದಲ್ಲಿ ಪ್ರವೇಶಿಸುವುದಕ್ಕೆ ಎಂಥವನು ಯೋಗ್ಯನು?

4 ಯಾರು ಅಯೋಗ್ಯಕಾರ್ಯಗಳಲ್ಲಿ ಮನಸ್ಸಿಡದೆ,

ಮೋಸ ಪ್ರಮಾಣಮಾಡದೆ,

ಶುದ್ಧಹಸ್ತವೂ, ನಿರ್ಮಲಮನಸ್ಸೂ ಉಳ್ಳವನಾಗಿದ್ದಾನೋ,

5 ಅವನೇ ಯೆಹೋವನಿಂದ ಶುಭವನ್ನು ಹೊಂದುವನು;

ತನ್ನ ರಕ್ಷಕನಾದ ದೇವರಿಂದ ನೀತಿಫಲವನ್ನು ಪಡೆಯುವನು.

6 ಇಂಥವರೇ ಆತನ ದರ್ಶನವನ್ನು ಬಯಸುವವರು.

ಯಾಕೋಬ್ಯರ ದೇವರೇ, ನಿನ್ನ ಸಾನ್ನಿಧ್ಯವನ್ನು ಸೇರುವವರು ಇಂಥವರೇ. ಸೆಲಾ

7 ದ್ವಾರಗಳೇ, ಉನ್ನತವಾಗಿರ್ರಿ!

ಪುರಾತನವಾದ ಕದಗಳೇ ತೆರೆದುಕೊಂಡಿರ್ರಿ!

ಮಹಾಮಹಿಮೆಯುಳ್ಳ ಅರಸನು ಆಗಮಿಸುತ್ತಾನೆ.

8 ಮಹಾಮಹಿಮೆಯುಳ್ಳ ಈ ಅರಸನು ಯಾರು?

ಮಹಾ ಬಲಿಷ್ಠನೂ, ವಿಶೇಷ ಪರಾಕ್ರಮಿಯೂ ಆಗಿರುವ ಯೆಹೋವ,

ಯುದ್ಧವೀರನಾಗಿರುವ ಯೆಹೋವ.

9 ದ್ವಾರಗಳೇ, ಉನ್ನತವಾಗಿರ್ರಿ!

ಪುರಾತನವಾದ ಕದಗಳೇ, ತೆರೆದುಕೊಂಡಿರ್ರಿ!

ಮಹಾಮಹಿಮೆಯುಳ್ಳ ಅರಸನು ಆಗಮಿಸುತ್ತಾನೆ.

10 ಮಹಾಮಹಿಮೆಯುಳ್ಳ ಈ ಅರಸನು ಯಾರು?

ಸೇನಾಧೀಶ್ವರನಾದ ಯೆಹೋವನೇ,

ಮಹಾಮಹಿಮೆಯುಳ್ಳ ಅರಸನು ಈತನೇ. ಸೆಲಾ.

Veja também

Publicidade
Bíblia Online Bíblia Online

Bíblia Online • Versão: 2026-06-18_12-43-22-