Publicidade

Salmos 146

ಯೆಹೋವನನ್ನು ಆಶ್ರಯಿಸಿಕೊಂಡವನು ಧನ್ಯನು

1 ಯೆಹೋವನಿಗೆ ಸ್ತೋತ್ರ!

ನನ್ನ ಮನವೇ, ಯೆಹೋವನನ್ನು ಸ್ತುತಿಸು.

2 ಪ್ರಾಣವಿರುವವರೆಗೂ ಯೆಹೋವನನ್ನು ಸ್ತುತಿಸುವೆನು,

ಜೀವಮಾನವೆಲ್ಲಾ ನನ್ನ ದೇವರನ್ನು ಕೊಂಡಾಡುವೆನು.

3 ಪ್ರಭುಗಳಲ್ಲಾಗಲಿ, ಮನುಷ್ಯರಲ್ಲಾಗಲಿ ಭರವಸವಿಡಬೇಡಿರಿ,

ಅವರು ಸಹಾಯ ಮಾಡ ಶಕ್ತರಲ್ಲ,

4 ಉಸಿರು ಹೋಗಲು ಅವರು ಮಣ್ಣಿಗೆ ಸೇರುತ್ತಾರೆ,

ಅವರ ಸಂಕಲ್ಪಗಳೆಲ್ಲಾ ಅದೇ ದಿನದಲ್ಲಿ ಹಾಳಾಗುವುದು.

5 ಯಾರಿಗೆ ಯಾಕೋಬನ ದೇವರು ಸಹಾಯಕನೋ,

ಯಾರು ತನ್ನ ದೇವರಾದ ಯೆಹೋವನನ್ನು ನಂಬಿರುತ್ತಾನೋ,

ಅವನೇ ಧನ್ಯನು.

6 ಭೂಮಿ, ಆಕಾಶ, ಸಾಗರ, ಜಲಚರ ಇವುಗಳನ್ನು ನಿರ್ಮಿಸಿದವನೂ,

ವಾಗ್ದಾನವನ್ನು ಯಾವಾಗಲೂ ನೆರವೇರಿಸುವವನೂ,

7 ಹಿಂಸೆಗೆ ಗುರಿಯಾದವರ ನ್ಯಾಯವನ್ನು ಸ್ಥಾಪಿಸುವವನೂ,

ಹಸಿದವರಿಗೆ ಆಹಾರ ಕೊಡುವವನೂ ಆತನೇ.

ಯೆಹೋವನು ಸೆರೆಯಲ್ಲಿರುವವರನ್ನು ಬಿಡಿಸುತ್ತಾನೆ.

8 ಯೆಹೋವನು ಕುರುಡರಿಗೆ ಕಣ್ಣು ಕೊಡುತ್ತಾನೆ.

ಯೆಹೋವನು ಕುಗ್ಗಿದವರನ್ನು ಉದ್ಧರಿಸುತ್ತಾನೆ.

ಯೆಹೋವನು ನೀತಿವಂತರನ್ನು ಪ್ರೀತಿಸುತ್ತಾನೆ.

9 ಯೆಹೋವನು ಪರದೇಶದವರನ್ನು ಕಾಪಾಡುತ್ತಾನೆ.

ಆತನು ಅನಾಥರಿಗೂ, ವಿಧವೆಯರಿಗೂ ಆಧಾರವಾಗಿದ್ದಾನೆ.

ಆದರೆ ದುಷ್ಟರ ಮಾರ್ಗವನ್ನು ಡೊಂಕು ಮಾಡುತ್ತಾನೆ.

10 ಯೆಹೋವನು ಸದಾಕಾಲವೂ ಅರಸನಾಗಿರುವನು,

ಚೀಯೋನೇ, ನಿನ್ನ ದೇವರು ತಲತಲಾಂತರಕ್ಕೂ ಆಳುವನು,

ಯೆಹೋವನಿಗೆ ಸ್ತೋತ್ರ!

Veja também

Publicidade
Bíblia Online Bíblia Online

Bíblia Online • Versão: 2026-06-18_14-04-22-