Publicidade

Salmos 25

ಇಬ್ರಿಯ ಅಕ್ಷರಕ್ರಮಾನುಸಾರವಾದ ಪ್ರಾರ್ಥನೆ
ದಾವೀದನ ಕೀರ್ತನೆ.

1 ಯೆಹೋವನೇ, ನನ್ನ ಮನಸ್ಸನ್ನು ನಿನ್ನಲ್ಲಿಯೇ ಇಟ್ಟಿದ್ದೇನೆ.

2 ನನ್ನ ದೇವರೇ, ನಿನ್ನನ್ನೇ ನಂಬಿದ್ದೇನೆ,

ನನ್ನನ್ನು ಅಪಮಾನಕ್ಕೆ ಗುರಿಪಡಿಸಬೇಡ.

ಶತ್ರುಗಳ ಉತ್ಸಾಹಕ್ಕೆ ಆಸ್ಪದಮಾಡಬೇಡ.

3 ನಿಷ್ಕಾರಣ ದ್ರೋಹಿಗಳಿಗೆ ಅಪಮಾನವಾಗಬೇಕೇ ಹೊರತು,

ನಿನ್ನನ್ನು ನಿರೀಕ್ಷಿಸಿದವರಿಗೆ ಎಂದಿಗೂ ಆಗಬಾರದು.

4 ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ತಿಳಿಯಪಡಿಸು;

ನೀನು ಒಪ್ಪುವ ದಾರಿಯನ್ನು ತೋರಿಸು.

5 ನಿನ್ನ ಸತ್ಯಾನುಸಾರವಾಗಿ ನನ್ನನ್ನು ನಡೆಸುತ್ತಾ ಉಪದೇಶಿಸು;

ನೀನೇ ನನ್ನನ್ನು ರಕ್ಷಿಸುವ ದೇವರು;

ಹಗಲೆಲ್ಲಾ ನಿನ್ನನ್ನೇ ನಿರೀಕ್ಷಿಸುವವನಾಗಿದ್ದೇನೆ.

6 ಯೆಹೋವನೇ, ನೀನು ಆದಿಯಿಂದಲೂ ನನ್ನನ್ನು ಕರುಣಿಸುವವನಾಗಿ,

ನನಗೆ ಮಾಡಿದ ಮಹೋಪಕಾರಗಳನ್ನು ನೆನಸಿಕೋ.

7 ಯೆಹೋವನೇ, ನನ್ನ ಯೌವನದ ತಪ್ಪುಗಳನ್ನೂ ಮತ್ತು ದ್ರೋಹಗಳನ್ನೂ ಮನಸ್ಸಿನಲ್ಲಿಡದೆ,

ನಿನ್ನ ಕೃಪೆಗೆ ತಕ್ಕಂತೆ ದಯಾಪೂರ್ವಕವಾಗಿ ನನ್ನನ್ನು ನೆನಪುಮಾಡಿಕೋ.

8 ಯೆಹೋವನು ದಯಾಳುವೂ, ಸತ್ಯಸ್ವರೂಪನೂ ಆಗಿದ್ದಾನೆ;

ದಾರಿತಪ್ಪಿದವರನ್ನು ಬೋಧಿಸಿ ಸನ್ಮಾರ್ಗದಲ್ಲಿ ನಡೆಸುವನು.

9 ಆತನು ದೀನರನ್ನು ತನ್ನ ವಿಧಿಗನುಗುಣವಾಗಿ ನಡೆಸುವನು;

ಅವರಿಗೆ ತನ್ನ ಮಾರ್ಗವನ್ನು ತೋರಿಸುವನು.

10 ಯೆಹೋವನ ನಿಬಂಧನೆ ಮತ್ತು ಆಜ್ಞೆಗಳನ್ನು ಕೈಕೊಂಡು ನಡೆಯುವವರಿಗೆ,

ಆತನ ಎಲ್ಲಾ ಮಾರ್ಗಗಳು ಕೃಪೆಯೂ, ಸತ್ಯತೆಯುಳ್ಳವು.

11 ಯೆಹೋವನೇ, ನನ್ನ ಪಾಪವು ಬಹುಘೋರವಾಗಿದೆ;

ಆದರೂ ನಿನ್ನ ಹೆಸರಿನ ನಿಮಿತ್ತ ಅದನ್ನು ಕ್ಷಮಿಸು.

12 ಯಾರು ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿರುವರೋ

ಅವರಿಗೆ ಉಚಿತವಾದ ಮಾರ್ಗವನ್ನು ಆತನು ಬೋಧಿಸುವನು.

13 ಅವರು ಸುಖದಿಂದಲೇ ಇರುವರು;

ಅವರ ಸಂತತಿಯವರು ದೇಶವನ್ನು ಅನುಭವಿಸುವರು.

14 ಯೆಹೋವನು ತನ್ನ ಸದ್ಭಕ್ತರಿಗೆ ಆಪ್ತಮಿತ್ರನಂತಿರುವನು;

ಅವರಿಗೆ ತನ್ನ ಒಡಂಬಡಿಕೆಯ ಅನುಭವವನ್ನು ದಯಪಾಲಿಸುವನು.

15 ನನ್ನ ದೃಷ್ಟಿ ಯಾವಾಗಲೂ ಯೆಹೋವನಲ್ಲಿದೆ;

ಆತನೇ ನನ್ನ ಕಾಲುಗಳನ್ನು ಬಲೆಯಿಂದ ಬಿಡಿಸುವವನು.

16 ನಾನು ಒಬ್ಬೊಂಟಿಗನೂ, ಬಾಧೆಪಡುವವನೂ ಆಗಿದ್ದೇನೆ;

ನೀನು ಕಟಾಕ್ಷವಿಟ್ಟು ನನ್ನನ್ನು ಕರುಣಿಸು.

17 ನನ್ನ ಮನೋವ್ಯಥೆಗಳನ್ನು ನಿವಾರಿಸು;

ಸಂಕಟಗಳಿಂದ ನನ್ನನ್ನು ಬಿಡಿಸು.

18 ನಾನು ಕುಗ್ಗಿರುವುದನ್ನೂ, ಕಷ್ಟಪಡುವುದನ್ನೂ ನೋಡಿ,

ನನ್ನ ಎಲ್ಲಾ ಪಾಪಗಳನ್ನು ಪರಿಹರಿಸು.

19 ನನಗೆ ಎಷ್ಟೋ ಶತ್ರುಗಳು ಇದ್ದಾರಲ್ಲಾ;

ಅವರು ಕಡು ವೈರತ್ವದಿಂದ ನನ್ನನ್ನು ಹಗೆಮಾಡುತ್ತಾರೆ.

20 ನನ್ನ ಪ್ರಾಣವನ್ನು ಕಾಪಾಡಿ ಉಳಿಸು;

ನಿನ್ನನ್ನೇ ಆಶ್ರಯಿಸಿಕೊಂಡಿದ್ದೇನೆ, ನನಗೆ ಆಶಾಭಂಗವಾಗಬಾರದು.

21 ನಿನ್ನನ್ನೇ ನಿರೀಕ್ಷಿಸಿಕೊಂಡಿದ್ದೇನೆ;

ನಿರ್ದೋಷಭಕ್ತಿಯೂ ಮತ್ತು ಯಥಾರ್ಥತ್ವವೂ ನನ್ನನ್ನು ಕಾಯಲಿ.

22 ದೇವರೇ, ಇಸ್ರಾಯೇಲರನ್ನು ಅವರ ಎಲ್ಲಾ ಬಾಧೆಗಳಿಂದ ವಿಮೋಚಿಸು.

Veja também

Publicidade
Bíblia Online Bíblia Online

Bíblia Online • Versão: 2026-06-18_10-32-54-