Publicidade

Salmos 86

ಶತ್ರಪೀಡಿತನ ವಿಜ್ಞಾಪನೆ
ದಾವೀದನ ಕೀರ್ತನೆ.

1 ಯೆಹೋವನೇ, ಕಿವಿಗೊಡು; ನನಗೆ ಸದುತ್ತರವನ್ನು ದಯಪಾಲಿಸು;

ಕುಗ್ಗಿದವನೂ, ದಿಕ್ಕಿಲ್ಲದವನೂ ಆಗಿದ್ದೇನೆ.

2 ನಾನು ನಿನ್ನ ಭಕ್ತನು; ನನ್ನ ಪ್ರಾಣವನ್ನು ಉಳಿಸು;

ನೀನೇ ನನ್ನ ದೇವರು; ನಿನ್ನಲ್ಲಿ ಭರವಸವಿಟ್ಟಿರುವ ನಿನ್ನ ಸೇವಕನನ್ನು ರಕ್ಷಿಸು.

3 ಕರ್ತನೇ, ಕರುಣಿಸು;

ದಿನವೆಲ್ಲಾ ನಿನಗೆ ಮೊರೆಯಿಡುತ್ತೇನೆ.

4 ಕರ್ತನೇ, ನಿನ್ನ ಸೇವಕನ ಹೃದಯವನ್ನು ಆನಂದಗೊಳಿಸು;

ನಿನ್ನನ್ನೇ ನಿರೀಕ್ಷಿಸುತ್ತಿರುವೆನಲ್ಲಾ.

5 ಕರ್ತನೇ, ನೀನು ಒಳ್ಳೆಯವನೂ, ಕ್ಷಮಿಸುವವನೂ,

ನಿನಗೆ ಮೊರೆಯಿಡುವವರೆಲ್ಲರಲ್ಲಿ ಕೃಪಾಪೂರ್ಣನೂ ಆಗಿದ್ದಿಯಲ್ಲಾ.

6 ಯೆಹೋವನೇ, ನನ್ನ ಪ್ರಾರ್ಥನೆಗೆ ಕಿವಿಗೊಡು;

ನನ್ನ ವಿಜ್ಞಾಪನೆಗಳ ಕೂಗನ್ನು ಲಾಲಿಸು.

7 ನೀನು ಸದುತ್ತರವನ್ನು ದಯಪಾಲಿಸುವಿಯೆಂದು ನಂಬಿ,

ನನ್ನ ಇಕ್ಕಟ್ಟಿನ ದಿನದಲ್ಲಿ ನಿನ್ನನ್ನೇ ಕರೆಯುವೆನು.

8 ಕರ್ತನೇ, ದೇವರುಗಳಲ್ಲಿ ನಿನಗೆ ಸಮಾನನೇ ಇಲ್ಲ;

ನಿನ್ನ ಕೃತ್ಯಗಳಿಗೆ ಸರಿಯಾದದ್ದು ಇನ್ನೊಂದಿಲ್ಲ.

9 ಕರ್ತನೇ, ನಿನ್ನಿಂದುಂಟಾದ ಎಲ್ಲಾ ಜನಾಂಗಗಳು ಬಂದು,

ನಿನಗೆ ಅಡ್ಡಬಿದ್ದು ನಿನ್ನ ನಾಮವನ್ನು ಘನಪಡಿಸುವವು.

10 ಮಹೋನ್ನತನು, ಮಹತ್ಕಾರ್ಯಗಳನ್ನು ನಡೆಸುವವನು ನೀನು;

ನೀನೊಬ್ಬನೇ ದೇವರು.

11 ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ಬೋಧಿಸು;

ನಿನ್ನ ಸತ್ಯತೆಯನ್ನು ನನ್ನ ದೃಷ್ಟಿಯಲ್ಲೇ ಇಟ್ಟುಕೊಂಡು ನಡೆಯುವೆನು.

ನಾನು ನಿನ್ನ ನಾಮದಲ್ಲಿ ಭಯಭಕ್ತಿಯಿಂದಿರುವಂತೆ ಏಕಮನಸ್ಸನ್ನು ಅನುಗ್ರಹಿಸು.

12 ಕರ್ತನೇ, ನನ್ನ ದೇವರೇ, ಮನಃಪೂರ್ವಕವಾಗಿ ನಿನ್ನನ್ನು ಕೊಂಡಾಡುವೆನು;

ಎಂದೆಂದಿಗೂ ನಿನ್ನ ನಾಮವನ್ನು ಘನಪಡಿಸುವೆನು.

13 ನೀನು ಬಹಳವಾಗಿ ಕನಿಕರಿಸಿ,

ನನ್ನ ಪ್ರಾಣವನ್ನು ಪಾತಾಳದ ತಳದಿಂದ ತಪ್ಪಿಸಿದ್ದಿಯಲ್ಲಾ.

14 ದೇವರೇ, ಅಹಂಕಾರಿಗಳು ನನಗೆ ವಿರುದ್ಧವಾಗಿ ಎದ್ದಿದ್ದಾರೆ;

ಬಲಾತ್ಕಾರಿಗಳ ಗುಂಪು ನನ್ನ ಪ್ರಾಣಕ್ಕಾಗಿ ಕಾದಿದೆ.

ಅವರು ನಿನ್ನನ್ನು ಲಕ್ಷಿಸುವುದಿಲ್ಲ.

15 ಕರ್ತನೇ, ನೀನು ಕನಿಕರವೂ, ದಯೆಯೂ ಉಳ್ಳ ದೇವರು;

ದೀರ್ಘಶಾಂತನು, ಬಹಳ ಪ್ರೀತಿಯೂ, ನಂಬಿಕೆಯೂ ಉಳ್ಳವನು.

16 ಕಟಾಕ್ಷವಿಟ್ಟು ನನ್ನನ್ನು ಕರುಣಿಸು; ನಿನ್ನ ಸೇವಕನಿಗೆ ಬಲವನ್ನು ಅನುಗ್ರಹಿಸು;

ನಿನ್ನ ಸೇವಕಳ ಮಗನನ್ನು ರಕ್ಷಿಸು.

17 ನನಗಾಗಿ ಒಂದು ಶುಭಸೂಚನೆಯನ್ನು ತೋರಿಸು;

ನನ್ನ ಶತ್ರುಗಳು ನೋಡಿ, "ಯೆಹೋವನು ಸಹಾಯಕನಾಗಿ

ಇವನನ್ನು ಸಂತೈಸಿದ್ದಾನೆ" ಎಂದು ನಾಚಿಕೆಪಡಲಿ.

Veja também

Publicidade
Bíblia Online Bíblia Online

Bíblia Online • Versão: 2026-06-18_10-32-54-