Publicidade

Salmos 47

ಸಾರ್ವಭೌಮನಾದ ಯೆಹೋವನು ಸಿಂಹಾಸನಾರೂಢನಾಗಿರುವುದು
ಪ್ರಧಾನಗಾಯಕನ ಕೀರ್ತನಸಂಗ್ರಹದಿಂದ ಆರಿಸಿಕೊಂಡದ್ದು; ಕೋರಹೀಯರ ಕೀರ್ತನೆ.

1 ಸರ್ವಜನಾಂಗದವರೇ, ಚಪ್ಪಾಳೆ ಹೊಡೆಯಿರಿ;

ಆರ್ಭಟದಿಂದ ದೇವರಿಗೆ ಜಯಧ್ವನಿ ಮಾಡಿರಿ.

2 ಮಹೋನ್ನತನಾದ ಯೆಹೋವನು ಭಯಂಕರನಾಗಿದ್ದಾನೆ;

ಆತನು ಭೂಲೋಕಕ್ಕೆಲ್ಲಾ ಮಹಾರಾಜನು ಆಗಿದ್ದಾನೆ.

3 ಆತನು ಜನಾಂಗಗಳನ್ನು ನಮಗೆ ಅಧೀನಪಡಿಸಿ,

ಜನಾಂಗಗಳನ್ನು ನಮ್ಮ ಕಾಲಕೆಳಗೆ ಹಾಕಿದ್ದಾನೆ.

4 ಆತನು ಘನತೆಯುಳ್ಳ ಯಾಕೋಬನ ವಂಶದವರಾದ ನಮ್ಮನ್ನು ಪ್ರೀತಿಸಿ,

ನಮ್ಮ ಸ್ವತ್ತನ್ನು ಆಯ್ದುಕೊಂಡಿದ್ದಾನೆ. ಸೆಲಾ

5 ದೇವರು ಜಯಘೋಷದಿಂದ ಏರಿದ್ದಾನೆ;

ಯೆಹೋವನು ತುತ್ತೂರಿಯ ಧ್ವನಿಯೊಡನೆ ಆರೋಹಣ ಮಾಡಿದ್ದಾನೆ.

6 ದೇವರನ್ನು ಸಂಕೀರ್ತಿಸಿರಿ, ಸ್ತುತಿಸಿ ಹಾಡಿರಿ;

ನಮ್ಮ ಅರಸನನ್ನು ಕೀರ್ತಿಸಿರಿ, ಕೊಂಡಾಡಿರಿ.

7 ಏಕೆಂದರೆ, ದೇವರು ಭೂಲೋಕಕ್ಕೆಲ್ಲಾ ರಾಜನು;

ಆತನನ್ನು ಜ್ಞಾನಯುಕ್ತರಾಗಿ ಕೀರ್ತಿಸಿರಿ.

8 ದೇವರು ಸರ್ವಾಧಿಪತ್ಯವನ್ನು ವಹಿಸಿಕೊಂಡಿದ್ದಾನೆ;

ಆತನು ತನ್ನ ಪರಿಶುದ್ಧ ಸಿಂಹಾಸನದಲ್ಲಿ ಆಸೀನನಾಗಿದ್ದಾನೆ.

9 ಜನಾಂಗಗಳನ್ನು ಆಳುವ ಪ್ರಭುಗಳು ಅಬ್ರಹಾಮನ

ದೇವರ ಪ್ರಜೆಗಳೊಂದಿಗೆ ಸೇರಿಕೊಂಡಿದ್ದಾರೆ;

ಏಕೆಂದರೆ ಭೂಪರಲೋಕದ ಗುರಾಣಿಗಳು ದೇವರಿಗೆ ಸೇರಿದವುಗಳೇ.

ಆತನೇ ಸರ್ವೋನ್ನತನು.

Veja também

Publicidade
Bíblia Online Bíblia Online

Bíblia Online • Versão: 2026-06-15_21-32-39-