Publicidade

Salmos 95

ದೇವರನ್ನು ವಿಶ್ವಾಸದಿಂದ ಆರಾಧಿಸುವುದು

1 ಬನ್ನಿರಿ, ಯೆಹೋವನಿಗೆ ಉತ್ಸಾಹದಿಂದ ಹಾಡೋಣ;

ನಮ್ಮ ರಕ್ಷಕನಾದ ಶರಣನಿಗೆ ಜಯಘೋಷ ಮಾಡೋಣ.

2 ಕೃತಜ್ಞತಾಸ್ತುತಿಯೊಡನೆ ಆತನ ಸನ್ನಿಧಿಗೆ ಸೇರೋಣ;

ಕೀರ್ತನೆಗಳಿಂದ ಆತನಿಗೆ ಜಯಘೋಷ ಮಾಡೋಣ.

3 ಯೆಹೋವನು ಮಹಾದೇವರೂ,

ಎಲ್ಲಾ ದೇವರುಗಳಲ್ಲಿ ಮಹಾರಾಜನೂ ಆಗಿದ್ದಾನೆ.

4 ಭೂಮಿಯ ಅಗಾಧವು ಆತನ ಕೈಯಲ್ಲಿರುತ್ತದೆ;

ಪರ್ವತಶಿಖರಗಳು ಆತನವೇ.

5 ಆತನೇ ಸಮುದ್ರವನ್ನು ನಿರ್ಮಿಸಿದವನು;

ಅದು ಆತನದೇ, ಒಣನೆಲವು ಆತನ ಕೈಕೆಲಸವೇ.

6 ಬನ್ನಿರಿ; ನಮ್ಮ ನಿರ್ಮಾಣಿಕನಾದ ಯೆಹೋವನಿಗೆ

ಸಾಷ್ಟಾಂಗವೆರಗಿ ಆರಾಧಿಸೋಣ.

7 ಆತನು ನಮ್ಮ ದೇವರು;

ನಾವೋ ಆತನು ಪಾಲಿಸುವ ಪ್ರಜೆಯೂ,

ಆತನ ಕೈಕೆಳಗಿರುವ ಹಿಂಡೂ ಆಗಿದ್ದೇವೆ.

ನೀವು ಈ ಹೊತ್ತು ಆತನ ಶಬ್ದಕ್ಕೆ ಕಿವಿಗೊಟ್ಟರೆ ಎಷ್ಟೋ ಒಳ್ಳೇಯದು.

8 ನಿಮ್ಮ ಹಿರಿಯರು ಅರಣ್ಯದಲ್ಲಿರುವ ಮೆರೀಬದಲ್ಲಿ,

ಮಸ್ಸಾದಲ್ಲಿ ಮಾಡಿದ ದಿನದಂತೆ,

ನೀವು ನಿಮ್ಮ ಹೃದಯವನ್ನು ಕಠಿಣಮಾಡಿಕೊಳ್ಳಬೇಡಿರಿ.

9 ಅಲ್ಲಿ ಅವರು ನನ್ನನ್ನು ಪರೀಕ್ಷಿಸಿದರು;

ನನ್ನ ಮಹತ್ಕಾರ್ಯಗಳನ್ನು ನೋಡಿದರೂ ನನ್ನನ್ನು ಪರಿಶೋಧಿಸಿದರು.

10 ನಾನು ನಲ್ವತ್ತು ವರ್ಷ ಆ ಸಂತತಿಯವರ ವಿಷಯದಲ್ಲಿ ಬೇಸರಗೊಂಡೆನು;

"ಈ ಜನರು ಹೃದಯದಲ್ಲಿ ತಪ್ಪಿಹೋಗುವವರು,

ನನ್ನ ಆಜ್ಞೆಗಳಿಗೆ ವಿಧೇಯರಾಗದವರು" ಎಂದು ಹೇಳಿದೆನು.

11 ಆದುದರಿಂದ ಇವರು, "ನನ್ನ ವಿಶ್ರಾಂತಿಯಲ್ಲಿ ಸೇರಬಾರದು" ಎಂದು

ಕೋಪಗೊಂಡು ಪ್ರಮಾಣಮಾಡಿದೆನು.

Veja também

Publicidade
Bíblia Online Bíblia Online

Bíblia Online • Versão: 2026-06-15_21-32-39-