Publicidade

Salmos 97

ಸಾರ್ವಭೌಮನಾದ ಯೆಹೋವನನ್ನು ಸ್ತುತಿಸುವುದು

1 ಯೆಹೋವನು ರಾಜ್ಯಾಧಿಕಾರವನ್ನು ವಹಿಸಿದ್ದಾನೆ;

ಭೂಲೋಕವು ಸಂತೋಷಿಸಲಿ;

ಸಮುದ್ರದ ತೀರಪ್ರದೇಶಗಳೆಲ್ಲಾ ಹರ್ಷಿಸಲಿ.

2 ಮೋಡಗಳೂ, ಕಾರ್ಗತ್ತಲೆಯೂ ಆತನ ಸುತ್ತಲೂ ಇರುತ್ತವೆ;

ಯೆಹೋವನು ನೀತಿ ಮತ್ತು ನ್ಯಾಯಗಳಿಂದ ಆಳುತ್ತಾನೆ.

3 ಬೆಂಕಿಯು ಆತನ ಮುಂದೆ ಹೋಗಿ,

ಸುತ್ತಲೂ ಆವರಿಸಿ ಆತನ ವೈರಿಗಳನ್ನು ದಹಿಸಿಬಿಡುತ್ತದೆ.

4 ಆತನ ಮಿಂಚುಗಳು ಲೋಕವನ್ನು ಬೆಳಗಿಸಿದವು;

ಭೂಮಿಯು ಅದನ್ನು ಕಂಡು ನಡುಗಿತು.

5 ಸಾರ್ವಭೌಮನಾದ ಯೆಹೋವನ ಎದುರಿನಲ್ಲಿ

ಪರ್ವತಗಳು ಮೇಣದಂತೆ ಕರಗಿಹೋದವು.

6 ಗಗನಮಂಡಲವು ಆತನ ನೀತಿಯನ್ನು ಪ್ರಸಿದ್ಧಪಡಿಸಿತು;

ಎಲ್ಲಾ ಜನರು ಆತನ ಮಹಿಮೆಯನ್ನು ಕಂಡರು.

7 ವಿಗ್ರಹಗಳಲ್ಲಿ ಹಿಗ್ಗುವವರೂ,

ಮೂರ್ತಿಪೂಜಕರೆಲ್ಲರೂ ನಾಚಿಕೆಗೆ ಒಳಪಡುವರು;

ದೇವರುಗಳೆಂದು ಕರೆಯಲ್ಪಡುವವರೇ, ನೀವೆಲ್ಲರೂ ಆತನಿಗೆ ಅಡ್ಡಬೀಳಿರಿ.

8 ಯೆಹೋವನೇ, ನೀನು ನ್ಯಾಯಸ್ಥಾಪಿಸಿದ ವಾರ್ತೆಯನ್ನು ಕೇಳಿ

ಚೀಯೋನ್ ಪಟ್ಟಣವು ಹರ್ಷಿಸಿತು;

ಯೆಹೂದ ಪ್ರಾಂತ್ಯದ ಊರುಗಳು ಸಂತೋಷಿಸಿದವು.

9 ಯೆಹೋವನೇ, ನೀನು ಭೂಲೋಕದ ಸರ್ವಾಧಿಕಾರಿ;

ಎಲ್ಲಾ ದೇವರುಗಳಲ್ಲಿ ಮಹೋನ್ನತನು ನೀನೇ.

10 ಕೆಟ್ಟತನವನ್ನು ಹಗೆಮಾಡುವವರನ್ನು, ಯೆಹೋವನನ್ನು ಪ್ರೀತಿಸುತ್ತಾನೆ.

ಆತನು ತನ್ನ ಭಕ್ತರ ಪ್ರಾಣಗಳನ್ನು ಕಾಯುವವನಾಗಿ,

ದುಷ್ಟರ ಕೈಯೊಳಗಿಂದ ಅವರನ್ನು ಬಿಡಿಸುವನು.

11 ನೀತಿವಂತರಿಗೋಸ್ಕರ ಬೆಳಕು ಪ್ರಕಾಶಿಸುವುದು,

ಯಥಾರ್ಥಹೃದಯವುಳ್ಳವರಿಗೆ ಸಂತೋಷವೂ ಕೊಡಲ್ಪಟ್ಟಿವೆ.

12 ನೀತಿವಂತರೇ, ಯೆಹೋವನಲ್ಲಿ ಆನಂದಿಸಿರಿ;

ಆತನ ಪರಿಶುದ್ಧನಾಮವನ್ನು ಕೊಂಡಾಡಿರಿ.

Veja também

Publicidade
Bíblia Online Bíblia Online

Bíblia Online • Versão: 2026-06-15_21-32-39-