Publicidade

Salmos 33

ರಕ್ಷಕನನ್ನು ಕೀರ್ತಿಸುವ ಭಕ್ತ

1 ನೀತಿವಂತರೇ, ಯೆಹೋವನ ವಿಷಯದಲ್ಲಿ ಉಲ್ಲಾಸಪಡಿರಿ;

ಯಥಾರ್ಥಚಿತ್ತರು ಆತನನ್ನು ಸ್ತುತಿಸುವುದು ಯುಕ್ತವಾಗಿದೆ.

2 ಕಿನ್ನರಿಯನ್ನು ನುಡಿಸುತ್ತಾ ಯೆಹೋವನನ್ನು ಕೊಂಡಾಡಿರಿ;

ಹತ್ತುತಂತಿಗಳ ಸ್ವರಮಂಡಲವನ್ನು ನುಡಿಸುತ್ತಾ ಸಂಕೀರ್ತಿಸಿರಿ.

3 ಆತನ ಘನಕ್ಕಾಗಿ ನೂತನ ಕೀರ್ತನೆಯನ್ನು ಹಾಡಿರಿ;

ಉತ್ಸಾಹಧ್ವನಿಯೊಡನೆ ಇಂಪಾಗಿ ಬಾರಿಸಿರಿ.

4 ಯೆಹೋವನ ವಚನವು ಯಥಾರ್ಥವಾದದ್ದು;

ಆತನ ಕೃತ್ಯವೆಲ್ಲಾ ನಂಬಿಕೆಯುಳ್ಳದ್ದಾಗಿವೆ.

5 ಆತನು ನೀತಿ ಮತ್ತು ನ್ಯಾಯಗಳನ್ನು ಪ್ರೀತಿಸುವವನು;

ಭೂಲೋಕವೆಲ್ಲಾ ಯೆಹೋವನ ಕೃಪೆಯಿಂದ ತುಂಬಿದೆ.

6 ಯೆಹೋವನ ಅಪ್ಪಣೆಯಿಂದಲೇ ಆಕಾಶವು ಉಂಟಾಯಿತು;

ಅದರಲ್ಲಿರುವುದೆಲ್ಲವೂ ಆತನ ಶ್ವಾಸದಿಂದ ನಿರ್ಮಿತವಾಯಿತು.

7 ನೀರುಗಳನ್ನು ಒಟ್ಟುಗೂಡಿಸಿ ಸಮುದ್ರವನ್ನು ಮಾಡಿದವನು ಆತನೇ;

ಭೂಮಿಯ ಕೆಳಗೆ ಜಲಾಶಯಗಳನ್ನು ಇಟ್ಟವನು ಆತನೇ.

8 ಭೂಲೋಕದವರೆಲ್ಲರೂ ಯೆಹೋವನಿಗೆ ಭಯಪಡಲಿ;

ಭೂನಿವಾಸಿಗಳೆಲ್ಲರೂ ಆತನಿಗೆ ಹೆದರಲಿ.

9 ಆತನು ನುಡಿದ ಮಾತ್ರಕ್ಕೆ ಸಮಸ್ತವೂ ಉಂಟಾಯಿತು;

ಆತನು ಆಜ್ಞಾಪಿಸುತ್ತಲೇ ಸರ್ವವೂ ಸ್ಥಾಪನೆಯಾಯಿತು.

10 ಯೆಹೋವನು ಅನ್ಯಜನರ ಸಂಕಲ್ಪಗಳನ್ನು ವ್ಯರ್ಥಮಾಡುತ್ತಾನೆ;

ಅವರ ಯೋಚನೆಗಳನ್ನು ನಿಷ್ಫಲಮಾಡುತ್ತಾನೆ.

11 ಯೆಹೋವನ ಆಲೋಚನೆಯೋ ಶಾಶ್ವತವಾಗಿಯೇ ನಿಲ್ಲುವುದು;

ಆತನ ಸಂಕಲ್ಪವು ಎಂದಿಗೂ ಕದಲುವುದಿಲ್ಲ.

12 ಯಾರಿಗೆ ಯೆಹೋವನೇ ದೇವರಾಗಿದ್ದಾನೋ,

ಯಾವ ಜನಾಂಗದವರನ್ನು ಸ್ವಕೀಯರನ್ನಾಗಿ ಆದುಕೊಂಡಿದ್ದಾನೋ ಅವರೇ ಧನ್ಯರು.

13 ಯೆಹೋವನು ಆಕಾಶದಿಂದ ಮನುಷ್ಯರೆಲ್ಲರನ್ನು ನೋಡುತ್ತಾನೆ;

14 ತಾನಿರುವ ಸ್ಥಾನದಿಂದ ಭೂನಿವಾಸಿಗಳೆಲ್ಲರನ್ನು ದೃಷ್ಟಿಸುತ್ತಾನೆ.

15 ಅವರೆಲ್ಲರ ಹೃದಯಗಳನ್ನು ನಿರ್ಮಿಸಿದವನೂ,

ಅವರ ಕೃತ್ಯಗಳನ್ನೆಲ್ಲಾ ವಿವೇಚಿಸುವವನೂ ಆತನೇ.

16 ಮಹಾ ಸೇನಾಬಲದಿಂದಲೇ ಯಾವ ಅರಸನಿಗೂ ಜಯವಾಗುವುದಿಲ್ಲ;

ಯಾವ ಶೂರನೂ ಅಧಿಕವಾದ ಭುಜಬಲದಿಂದ ಸುರಕ್ಷಿತನಾಗುವುದಿಲ್ಲ.

17 ಜೀವದ ರಕ್ಷಣೆಗಾಗಿ ಕುದುರೆಯು ಪ್ರಯೋಜನವಿಲ್ಲ;

ಅದು ತನ್ನ ವಿಶೇಷಬಲದಿಂದ ಯಾರನ್ನೂ ರಕ್ಷಿಸಲಾರದು.

18 ಯೆಹೋವನಾದರೋ ತನ್ನಲ್ಲಿ ಭಯಭಕ್ತಿಯುಳ್ಳವರನ್ನು ಕಟಾಕ್ಷಿಸುತ್ತಾನೆ;

ತನ್ನ ಕೃಪೆಯನ್ನು ನಿರೀಕ್ಷಿಸುವವರನ್ನು ಲಕ್ಷಿಸುತ್ತಾನೆ.

19 ಅವರ ಪ್ರಾಣವನ್ನು ಮರಣದಿಂದ ತಪ್ಪಿಸುವನು;

ಬರಗಾಲದಲ್ಲಿ ಅವರ ಜೀವವನ್ನು ಉಳಿಸುವನು.

20 ನಮ್ಮ ಮನಸ್ಸು ಯೆಹೋವನಿಗೋಸ್ಕರ ಕಾದಿದೆ;

ನಮ್ಮ ಸಹಾಯವೂ, ಗುರಾಣಿಯೂ ಆತನೇ.

21 ಆತನಲ್ಲಿ ನಮ್ಮ ಹೃದಯವು ಸಂತೋಷಿಸುವುದು;

ಆತನ ಪರಿಶುದ್ಧನಾಮದಲ್ಲಿ ಭರವಸವಿಟ್ಟಿದ್ದೇವೆ.

22 ಯೆಹೋವನೇ, ನಾವು ನಿನ್ನನ್ನೇ ನಿರೀಕ್ಷಿಸಿಕೊಂಡಿದ್ದೇವೆ;

ನಿನ್ನ ಕೃಪೆಯು ನಮ್ಮ ಮೇಲೆ ಇರಲಿ.

Veja também

Publicidade
Bíblia Online Bíblia Online

Bíblia Online • Versão: 2026-06-15_21-32-39-