Publicidade

Salmos 51

ಪಾಪಕ್ಷಮಾಪಣೆಗಾಗಿ ವಿಜ್ಞಾಪನೆ
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ದಾವೀದನು ಬತ್ಷೆಬಳ ಬಳಿಗೆ ಹೋದ ಮೇಲೆ ಪ್ರವಾದಿಯಾದ ನಾತಾನನು ಎಚ್ಚರಿಸಿದಾಗ ರಚಿಸಿದ ಕೀರ್ತನೆ.

1 ಪ್ರೀತಿಸ್ವರೂಪನಾದ ದೇವರೇ, ನನ್ನನ್ನು ಕರುಣಿಸು;

ಕರುಣಾನಿಧಿಯೇ, ನನ್ನ ದ್ರೋಹವನ್ನೆಲ್ಲಾ ಅಳಿಸಿಬಿಡು.

2 ನನ್ನ ಪಾಪವನ್ನು ಸಂಪೂರ್ಣವಾಗಿ ತೊಳೆದುಬಿಡು;

ನನ್ನ ದೋಷವನ್ನು ಪರಿಹರಿಸಿ, ನನ್ನನ್ನು ಶುದ್ಧಿಗೊಳಿಸು.

3 ನಾನು ದ್ರೋಹಿ ಎಂದು ನಾನೇ ಒಪ್ಪಿಕೊಂಡಿದ್ದೇನೆ;

ನನ್ನ ಪಾಪವು ಯಾವಾಗಲೂ ನನ್ನ ಮುಂದೆ ಇದೆ.

4 ನಿನಗೇ, ಕೇವಲ ನಿನಗೇ ತಪ್ಪುಮಾಡಿದ್ದೇನೆ;

ನಿನ್ನ ದೃಷ್ಟಿಗೆ ಕೆಟ್ಟದ್ದಾಗಿರುವುದನ್ನೇ ಮಾಡಿದ್ದೇನೆ.

ನಿನ್ನ ನಿರ್ಣಯ ನ್ಯಾಯವಾಗಿಯೂ, ನಿನ್ನ ತೀರ್ಪು ನಿಷ್ಕಳಂಕವಾಗಿಯೂ ಇರುತ್ತದೆ.

5 ಹುಟ್ಟಿದಂದಿನಿಂದ ನಾನು ಪಾಪಿಯೇ;

ಮಾತೃಗರ್ಭವನ್ನು ಹೊಂದಿದ ದಿನದಿಂದ ದ್ರೋಹಿಯೇ.

6 ಯಥಾರ್ಥಚಿತ್ತವೇ ನಿನಗೆ ಸಂತೋಷ;

ಸುಜ್ಞಾನದ ರಹಸ್ಯಗಳನ್ನು ನನಗೆ ತಿಳಿಯಪಡಿಸು.

7 ಹಿಸ್ಸೋಪ್ ಗಿಡದ ಬರಲಿನಿಂದ ನೀರನ್ನು ಚಿಮಕಿಸಿಯೋ ಎಂಬಂತೆ

ನನ್ನ ಅಶುದ್ಧತ್ವವನ್ನು ತೆಗೆದುಬಿಡು, ಆಗ ಶುದ್ಧನಾಗುವೆನು;

ನನ್ನನ್ನು ತೊಳೆ, ಆಗ ಹಿಮಕ್ಕಿಂತಲೂ ಬೆಳ್ಳಗಾಗುವೆನು.

8 ನನ್ನಲ್ಲಿ ಸಂಭ್ರಮೋತ್ಸವದ ಧ್ವನಿ ಉಂಟಾಗುವಂತೆ ಮಾಡು;

ಆಗ ನೀನು ಜಜ್ಜಿದ ಎಲುಬುಗಳು ಆನಂದಪಡುವವು.

9 ನನ್ನ ದೋಷಕ್ಕೆ ವಿಮುಖನಾಗು;

ನನ್ನ ಪಾಪಗಳನ್ನೆಲ್ಲಾ ಅಳಿಸಿಬಿಡು.

10 ದೇವರೇ, ನನ್ನಲ್ಲಿ ಶುದ್ಧಹೃದಯವನ್ನು ನಿರ್ಮಿಸು;

ನನಗೆ ಸ್ಥಿರಚಿತ್ತವನ್ನು ಅನುಗ್ರಹಿಸಿ ನನ್ನನ್ನು ನೂತನಪಡಿಸು.

11 ನಿನ್ನ ಸನ್ನಿಧಿಯಿಂದ ನನ್ನನ್ನು ತಳ್ಳಬೇಡ;

ನಿನ್ನ ಪರಿಶುದ್ಧಾತ್ಮವನ್ನು ನನ್ನಿಂದ ತೆಗೆಯಬೇಡ.

12 ನಿನ್ನ ರಕ್ಷಣಾನಂದವನ್ನು ನಾನು ಪುನಃ ಅನುಭವಿಸುವಂತೆ ಮಾಡು;

ನನ್ನಲ್ಲಿ ಸಿದ್ಧಮನಸ್ಸನ್ನು ಹುಟ್ಟಿಸಿ ನನಗೆ ಆಧಾರನಾಗು.

13 ಆಗ ನಿನ್ನ ಮಾರ್ಗವನ್ನು ದ್ರೋಹಿಗಳಿಗೆ ಬೋಧಿಸುವೆನು;

ಪಾಪಿಗಳು ನಿನ್ನ ಕಡೆಗೆ ತಿರುಗಿಕೊಳ್ಳುವರು.

14 ದೇವರೇ, ನನ್ನ ರಕ್ಷಣಾ ಕರ್ತನೇ,

ಪ್ರಾಣಹತ್ಯದ ಅಪರಾಧದಿಂದ ನನ್ನನ್ನು ಬಿಡಿಸು;

ಆಗ ನನ್ನ ನಾಲಿಗೆಯು ಉತ್ಸಾಹದಿಂದ ನಿನ್ನ ನೀತಿಯನ್ನು ಕೊಂಡಾಡುವುದು.

15 ಕರ್ತನೇ, ನನ್ನ ಬಾಯಿ ನಿನ್ನನ್ನು ಸ್ತೋತ್ರಮಾಡುವಂತೆ

ನನ್ನ ತುಟಿಗಳನ್ನು ತೆರೆಯಮಾಡು.

16 ನಿನಗೆ ಯಜ್ಞಗಳಲ್ಲಿ ಅಪೇಕ್ಷೆಯಿಲ್ಲ, ಇದ್ದರೆ ಸಮರ್ಪಿಸುತ್ತಿದ್ದೆನು;

ಸರ್ವಾಂಗಹೋಮಗಳಲ್ಲಿ ನಿನಗೆ ಸಂತೋಷವಿಲ್ಲ.

17 ಕುಗ್ಗಿದ ಮನಸ್ಸೇ ದೇವರಿಗೆ ಇಷ್ಟವಾದ ಯಜ್ಞ;

ದೇವರೇ, ಪಶ್ಚಾತ್ತಾಪದಿಂದ ಜಜ್ಜಿಹೋದ ಮನಸ್ಸನ್ನು ನೀನು ತಿರಸ್ಕರಿಸುವುದಿಲ್ಲ.

18 ಚೀಯೋನ್ ಪಟ್ಟಣವನ್ನು ಕಟಾಕ್ಷಿಸಿ ಅದಕ್ಕೆ ಶುಭವನ್ನುಂಟುಮಾಡು;

ಯೆರೂಸಲೇಮಿನ ಪೌಳಿಗೋಡೆಯನ್ನು ಕಟ್ಟಿಸು.

19 ಆಗ ಜನರು ನ್ಯಾಯವಾದ ಯಜ್ಞಗಳನ್ನೂ, ಸರ್ವಾಂಗಹೋಮಗಳನ್ನೂ ಸಮರ್ಪಿಸಿ,

ದೇವರೇ ನಿನಗೆ ಸಂತೋಷವನ್ನು ಉಂಟುಮಾಡುವರು.

ನಿನ್ನ ಯಜ್ಞವೇದಿಯ ಮೇಲೆ ಹೋರಿಗಳನ್ನು ಸಮರ್ಪಿಸುವರು.

Veja também

Publicidade
Bíblia Online Bíblia Online

Bíblia Online • Versão: 2026-06-18_14-04-22-