Publicidade

Salmos 27

ಗಂಡಾಂತರದಲ್ಲಿ ಭಕ್ತನ ನಂಬಿಕೆ
ದಾವೀದನ ಕೀರ್ತನೆ.

1 ಯೆಹೋವನು ನನಗೆ ಬೆಳಕೂ, ರಕ್ಷಕನೂ ಆಗಿದ್ದಾನೆ;

ನಾನು ಯಾರಿಗೆ ಭಯಪಟ್ಟೆನು?

ಯೆಹೋವನು ನನ್ನ ಪ್ರಾಣದ ಆಧಾರವು;

ನಾನು ಯಾರಿಗೆ ಹೆದರೇನು?

2 ನನ್ನನ್ನು ಬಾಧಿಸುತ್ತಿರುವ ದುರ್ವೈರಿಗಳು

ನನ್ನನ್ನು ನುಂಗಿಬಿಡಬೇಕೆಂದು ಬಂದು,

ತಾವೇ ನೆಲಕ್ಕೆ ಬಿದ್ದುಹೋದರು.

3 ನನಗೆ ವಿರುದ್ಧವಾಗಿ ದಂಡು ಬಂದಿಳಿದರೂ ನನಗೇನೂ ಭಯವಿಲ್ಲ;

ಚತುರಂಗಬಲವು ಯುದ್ಧಸನ್ನದ್ಧವಾಗಿ ನಿಂತರೂ,

ಭರವಸವುಳ್ಳವನಾಗಿಯೇ ಇರುವೆನು.

4 ನನ್ನ ಜೀವಮಾನದಲ್ಲೆಲ್ಲಾ ಯೆಹೋವನ ಮನೆಯಲ್ಲಿ ವಾಸಮಾಡುತ್ತಾ,

ಆತನ ಪ್ರಸನ್ನತೆಯನ್ನು ನೋಡುವುದಕ್ಕೂ,

ಆತನ ಮಂದಿರದಲ್ಲಿ ಧ್ಯಾನ ಮಾಡುವುದಕ್ಕೂ

ನನಗೆ ಅಪ್ಪಣೆಯಾಗಬೇಕೆಂಬ ಒಂದೇ ವರವನ್ನು

ಯೆಹೋವನಿಂದ ಕೇಳಿಕೊಂಡು ಅದನ್ನೇ ಎದುರು ನೋಡುತ್ತಿರುವೆನು.

5 ಅಪಾಯಕಾಲದಲ್ಲಿ ಆತನು ನನ್ನನ್ನು ಗುಪ್ತಸ್ಥಳದಲ್ಲಿ ಅಡಗಿಸುವನು;

ತನ್ನ ಗುಡಾರವೆಂಬ ಆಶ್ರಯಸ್ಥಾನದಲ್ಲಿ ನನ್ನನ್ನು ಭದ್ರಪಡಿಸುವನು;

ಪರ್ವತಶಿಖರದ ಮೇಲೆ ನನ್ನನ್ನು ಸುರಕ್ಷಿತವಾಗಿ ನಿಲ್ಲಿಸುವನು.

6 ಹೀಗಿರುವುದರಿಂದ ನನ್ನ ಸುತ್ತಲಿರುವ ವೈರಿಗಳ ಮೇಲೆ,

ನನ್ನ ತಲೆ ಎತ್ತಲ್ಪಟ್ಟಿರುವುದು;

ನಾನು ಯೆಹೋವನ ಗುಡಾರದಲ್ಲಿ,

ಉತ್ಸಾಹಧ್ವನಿಯೊಡನೆ ಯಜ್ಞಗಳನ್ನು ಸಮರ್ಪಿಸುವೆನು.

ಆತನನ್ನು ಹಾಡುತ್ತಾ ವಾದ್ಯಬಾರಿಸುವೆನು.

7 ಯೆಹೋವನೇ, ನಿನಗೆ ಗಟ್ಟಿಯಾಗಿ ಮೊರೆಯಿಡುತ್ತೇನೆ;

ನನ್ನನ್ನು ಕರುಣಿಸಿ, ಸದುತ್ತರವನ್ನು ದಯಪಾಲಿಸು.

8 "ನನ್ನ ಸಾನ್ನಿಧ್ಯಕ್ಕೆ ಬಾ" ಎಂಬ ನಿನ್ನ ಮಾತಿಗೆ,

ನಾನು, "ಯೆಹೋವನೇ, ನಿನ್ನ ಸಾನ್ನಿಧ್ಯಕ್ಕೆ ಬಂದೇ ಬರುವೆನು" ಎಂದು ಉತ್ತರಕೊಟ್ಟೆನು.

9 ನನಗೆ ವಿಮುಖನಾಗಿರಬೇಡ;

ನಿನ್ನ ಸೇವಕನನ್ನು ಕೋಪದಿಂದ ತಳ್ಳಬೇಡ.

ನೀನು ನನಗೆ ಸಹಾಯಕನಾಗಿಯೇ ಇದ್ದೆಯಲ್ಲವೇ;

ನನ್ನನ್ನು ರಕ್ಷಿಸಿದ ದೇವರೇ, ಕೈಬಿಡಬೇಡ, ತೊರೆದುಬಿಡಬೇಡ.

10 ತಂದೆತಾಯಿಗಳು ನನ್ನನ್ನು ತೊರೆದುಬಿಟ್ಟರೇನು;

ಯೆಹೋವನು ನನ್ನನ್ನು ಸೇರಿಸಿಕೊಳ್ಳುವನು.

11 ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ಬೋಧಿಸು;

ಹೊಂಚುಹಾಕಿರುವವರಿಗೆ ಸಿಕ್ಕದ ಹಾಗೆ ನನ್ನನ್ನು ಸಮವಾದ ದಾರಿಯಲ್ಲಿ ನಡೆಸು.

12 ಸುಳ್ಳುಸಾಕ್ಷಿಗಳೂ ಬೆದರಿಸುವವರೂ ನನಗೆ ವಿರುದ್ಧವಾಗಿ ಎದ್ದಿದ್ದಾರೆ;

ಇಂಥ ವೈರಿಗಳ ವಶಕ್ಕೆ ನನ್ನನ್ನು ಕೊಡಬೇಡ.

13 ಜೀವಲೋಕದಲ್ಲಿಯೇ ಯೆಹೋವನ ದಯೆಯನ್ನು

ಅನುಭವಿಸುವೆನು ಎಂದು ದೃಢವಾಗಿ ನಂಬಿದ್ದೇನೆ.

14 ಯೆಹೋವನನ್ನು ನಿರೀಕ್ಷಿಸಿಕೊಂಡಿರು, ದೃಢವಾಗಿರು;

ನಿನ್ನ ಹೃದಯವು ಧೈರ್ಯದಿಂದಿರಲಿ;

ಯೆಹೋವನನ್ನು ನಿರೀಕ್ಷಿಸಿಕೊಂಡೇ ಇರು.

Veja também

Publicidade
Bíblia Online Bíblia Online

Bíblia Online • Versão: 2026-06-18_10-32-54-