Publicidade

Salmos 65

ಲೋಕಪರಿಪಾಲನೆ ಮತ್ತು ಫಲಸಮೃದ್ಧಿಗಾಗಿ ದೇವರನ್ನು ಸ್ತುತಿಸುವುದು
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ದಾವೀದನ ಕೀರ್ತನೆ, ಹಾಡು.

1 ದೇವರೇ, ಚೀಯೋನಿನಲ್ಲಿ ನಿನಗೋಸ್ಕರ ಸ್ತೋತ್ರವು ಸಿದ್ಧವಾಗಿದೆ;

ಹರಕೆಗಳು ನಿನಗೆ ಸಲ್ಲುತ್ತವೆ.

2 ಪ್ರಾರ್ಥನೆಯನ್ನು ಕೇಳುವವನೇ,

ನರರೆಲ್ಲರೂ ನಿನ್ನ ಬಳಿಗೆ ಬರುವರು.

3 ನನ್ನ ಪಾಪಗಳನ್ನು ನಿವಾರಿಸಲು ನನ್ನಿಂದಾಗುವುದಿಲ್ಲ.

ಆದರೆ ನಮ್ಮ ದೋಷಪರಿಹಾರಕನು ನೀನೇ.

4 ನಿನ್ನ ಅಂಗಳದಲ್ಲಿ ವಾಸಿಸುವವರಾಗಿ,

ನಿನ್ನ ಸನ್ನಿಧಿಯಲ್ಲಿ ಸೇವೆಮಾಡುವುದಕ್ಕೋಸ್ಕರ,

ನೀನು ಯಾರನ್ನು ಆರಿಸಿಕೊಳ್ಳುತ್ತೀಯೋ ಅವರೇ ಧನ್ಯರು.

ನೀನು ವಾಸಿಸುವ ಮಹಾಪವಿತ್ರಾಲಯದ ಸೌಭಾಗ್ಯದಿಂದ

ನಮಗೆ ಸಂತೃಪ್ತಿಯಾಗಲಿ.

5 ನಮ್ಮ ರಕ್ಷಕನಾದ ದೇವರೇ,

ನೀನು ಭಯಂಕರ ಮಹತ್ಕಾರ್ಯಗಳನ್ನು ನಡೆಸಿ,

ನಿನ್ನ ನೀತಿಗನುಸಾರವಾಗಿ ನಮಗೆ ಸದುತ್ತರವನ್ನು ದಯಪಾಲಿಸುವಿ.

ಭೂಮಿಯ ಎಲ್ಲಾ ಕಡೆಯವರ,

ಬಹುದೂರ ಸಮುದ್ರದ ಆಚೆಯ ಎಲ್ಲಾ ನಿವಾಸಿಗಳ

ನಂಬಿಕೆಗೆ ಆಧಾರನು ನೀನೇ.

6 ನೀನು ಶೌರ್ಯವೆಂಬ ನಡುಕಟ್ಟನ್ನು ಬಿಗಿದುಕೊಂಡು,

ಬಲದಿಂದ ಪರ್ವತಗಳನ್ನು ಸ್ಥಿರವಾಗಿ ನಿಲ್ಲಿಸಿದವನು.

7 ನೀನು ಸಮುದ್ರ ತರಂಗಗಳ ಘೋಷವನ್ನು ತಡೆಯುವವನೂ,

ಜನಾಂಗಗಳ ಗೊಂದಲವನ್ನು ಶಾಂತಿಪಡಿಸುವವನೂ ಆಗಿದೀ.

8 ಭೂಮಿಯ ಕಟ್ಟಕಡೆಗಳಲ್ಲಿ ವಾಸಿಸುವವರೂ,

ನಿನ್ನ ಅದ್ಭುತಕೃತ್ಯಗಳಿಗಾಗಿ ಭಯಪಡುತ್ತಾರೆ;

ಪೂರ್ವದಿಂದ ಪಶ್ಚಿಮದವರೆಗೆ ಇರುವವರನ್ನು ಹರ್ಷಗೊಳಿಸುವಿ.

9 ನೀನು ನಮ್ಮ ದೇಶವನ್ನು ಕಟಾಕ್ಷಿಸಿ, ಅದರ ಮೇಲೆ ಮಳೆಸುರಿಸಿ,

ಚೆನ್ನಾಗಿ ಹದಗೊಳಿಸುತ್ತೀ; ದೇವರೇ, ನಿನ್ನ ಕಾಲುವೆಗಳಲ್ಲಿ ನೀರಿಗೆ ಕೊರತೆ ಇಲ್ಲ.

ಹೀಗೆ ಭೂಮಿಯನ್ನು ಸಿದ್ಧಮಾಡಿ ಮನುಷ್ಯರಿಗೆ ಧಾನ್ಯವನ್ನು ಒದಗಿಸುತ್ತಿ.

10 ನೇಗಿಲಗೆರೆಗಳನ್ನು ತೇವಗೊಳಿಸಿ,

ಮಳೆಯಿಂದ ಅದರ ಹೆಂಟೆಗಳನ್ನು ಕರಗಿಸಿ ಸಮಮಾಡುತ್ತಿ;

ಅದರ ಬೆಳೆಯನ್ನು ವೃದ್ಧಿಪಡಿಸುತ್ತಿ.

11 ನಿನ್ನ ಕೃಪೆಯಿಂದ ಸಂವತ್ಸರಕ್ಕೆ ಸುಭಿಕ್ಷ ಕಿರೀಟವನ್ನು ಇಟ್ಟಿದ್ದಿ;

ನೀನು ಹಾದುಹೋಗುವ ಮಾರ್ಗದಲ್ಲೆಲ್ಲಾ

ಸಮೃದ್ಧಿಕರವಾದ ವೃಷ್ಟಿಯು ಸುರಿಯುವುದು.

12 ಮೇವುಗಾಡುಗಳು ಹಸಿರಾಗಿ ಕಂಗೊಳಿಸುತ್ತವೆ;

ಗುಡ್ಡಗಳು ಹರ್ಷವೆಂಬ ನಡುಕಟ್ಟನ್ನು ಬಿಗಿದುಕೊಂಡಂತಿವೆ.

13 ಹುಲ್ಲುಗಾವಲುಗಳು ಕುರಿಹಿಂಡುಗಳೆಂಬ ವಸ್ತ್ರವನ್ನು ಹೊದ್ದುಕೊಂಡಿವೆ;

ತಗ್ಗುಗಳು ಬೆಳೆಯಿಂದ ಶೋಭಿಸುತ್ತವೆ;

ಅವು ಆನಂದಘೋಷಮಾಡಿ ಹಾಡುತ್ತವೋ ಎಂಬಂತಿವೆ.

Veja também

Publicidade
Bíblia Online Bíblia Online

Bíblia Online • Versão: 2026-06-16_18-40-07-