Publicidade

Salmos 135

ಸೃಷ್ಟಿಪಾಲಕನಾಗಿರುವ ಏಕದೇವರಿಗೆ ಸ್ತೋತ್ರ

1 ಯೆಹೋವನಿಗೆ ಸ್ತೋತ್ರ!

ಯೆಹೋವನ ನಾಮವನ್ನು ಸ್ತುತಿಸಿರಿ.

ಯೆಹೋವನ ಸೇವಕರೇ,

2 ಯೆಹೋವನ ಮಂದಿರದಲ್ಲಿಯೂ,

ನಮ್ಮ ದೇವರ ಆಲಯದ ಅಂಗಳಗಳಲ್ಲಿಯೂ ಸೇವೆ ಮಾಡುವವರೇ,

ಆತನನ್ನು ಕೀರ್ತಿಸಿರಿ.

3 ಯೆಹೋವನಿಗೆ ಸ್ತೋತ್ರ!

ಯೆಹೋವನು ಒಳ್ಳೆಯವನು.

ಆತನ ನಾಮವನ್ನು ಕೊಂಡಾಡಿರಿ;

ಆತನು ಕೃಪಾಪೂರ್ಣನು.

4 ಯೆಹೋವನು ಯಾಕೋಬನ ವಂಶದವರನ್ನು ತನಗಾಗಿಯೂ,

ಇಸ್ರಾಯೇಲರನ್ನು ಸ್ವಕೀಯ ಜನರನ್ನಾಗಿಯೂ ಆರಿಸಿಕೊಂಡನಲ್ಲಾ.

5 ಯೆಹೋವನು ದೊಡ್ಡವನೆಂದೂ,

ನಮ್ಮ ಕರ್ತನು ಎಲ್ಲಾ ದೇವರುಗಳಿಗಿಂತ ಹೆಚ್ಚಿನವನೆಂದೂ ತಿಳಿದಿದ್ದೇನೆ.

6 ಯೆಹೋವನು ಭೂಮಿಯಲ್ಲಿಯೂ, ಆಕಾಶದಲ್ಲಿಯೂ,

ಸಮುದ್ರಗಳಲ್ಲಿಯೂ, ಬೇರೆ ಎಲ್ಲಾ ಜಲರಾಶಿಗಳಲ್ಲಿಯೂ

ತನಗೆ ಬೇಕಾದದ್ದನ್ನು ಮಾಡುತ್ತಾನೆ.

7 ಆತನು ಭೂಮಿಯ ಕಟ್ಟಕಡೆಯಿಂದ ಮೋಡಗಳನ್ನು ಮೇಲೇರುವಂತೆ ಮಾಡುತ್ತಾನೆ;

ಮಳೆಗೋಸ್ಕರ ಮಿಂಚನ್ನು ಹೊಳೆಯುವಂತೆ ಮಾಡುತ್ತಾನೆ;

ತನ್ನ ಉಗ್ರಾಣದಿಂದ ಗಾಳಿಯನ್ನು ಬೀಸುವಂತೆ ಮಾಡುತ್ತಾನೆ.

8 ಆತನು ಐಗುಪ್ತದ ಮನುಷ್ಯರು ಮೊದಲುಗೊಂಡು ಪಶುಗಳವರೆಗೂ,

ಚೊಚ್ಚಲುಗಳನ್ನೆಲ್ಲಾ ಸಂಹರಿಸಿದನು.

9 ಐಗುಪ್ತವೇ, ಆತನು ನಿನ್ನ ಮಧ್ಯದಲ್ಲಿ ಫರೋಹನಿಗೂ,

ಅವನ ಸೇವಕರಿಗೂ ವಿರುದ್ಧವಾಗಿ ಅದ್ಭುತಗಳನ್ನು,

ಮಹತ್ಕಾರ್ಯಗಳನ್ನು ನಡೆಸಿದನು.

10 ಆತನು ದೊಡ್ಡ ಜನಾಂಗಗಳನ್ನು ನಾಶಮಾಡಿಬಿಟ್ಟನು;

ಬಲಿಷ್ಠ ರಾಜರನ್ನು ಕೊಂದುಹಾಕಿದನು.

11 ಅವರಲ್ಲಿ ಅಮೋರಿಯರ ಅರಸನಾದ ಸೀಹೋನನೂ,

ಬಾಷಾನಿನ ಅರಸನಾದ ಓಗನೂ ಇದ್ದರು.

ಆತನು ಕಾನಾನ್ ದೇಶದ ಎಲ್ಲಾ ರಾಜ್ಯಗಳನ್ನು ನಿರ್ಮೂಲ ಮಾಡಿದನು.

12 ಅವರ ದೇಶವನ್ನು ಇಸ್ರಾಯೇಲರಿಗೆ ಕೊಟ್ಟನು;

ಆತನ ಪ್ರಜೆಗೆ ಅದು ಸ್ವಾಸ್ತ್ಯವಾಯಿತು.

13 ಯೆಹೋವನೇ, ನಿನ್ನ ನಾಮವು ಶಾಶ್ವತವಾದದ್ದು;

ಯೆಹೋವನೇ, ನೀನು ತಲತಲಾಂತರಕ್ಕೂ ಸ್ಮರಿಸಲು ಯೋಗ್ಯನಾಗಿರುತ್ತೀ.

14 ನಿಜವಾಗಿ ಯೆಹೋವನು ತನ್ನ ಪ್ರಜೆಯ ನ್ಯಾಯವನ್ನು ಸ್ಥಾಪಿಸುವನು,

ತನ್ನ ಸೇವಕರನ್ನು ಕನಿಕರಿಸುವನು.

15 ಅನ್ಯಜನಗಳ ವಿಗ್ರಹಗಳು ಬೆಳ್ಳಿ ಮತ್ತು ಬಂಗಾರದವುಗಳೇ;

ಅವು ಮನುಷ್ಯರ ಕೈಕೆಲಸವಷ್ಟೇ.

16 ಅವುಗಳಿಗೆ ಬಾಯಿದ್ದರೂ ಮಾತನಾಡುವುದಿಲ್ಲ,

ಕಣ್ಣಿದ್ದರೂ ನೋಡುವುದಿಲ್ಲ,

17 ಕಿವಿಯಿದ್ದರೂ ಕೇಳುವುದಿಲ್ಲ,

ಇದಲ್ಲದೆ ಅವುಗಳ ಬಾಯಲ್ಲಿ ಶ್ವಾಸವೇ ಇಲ್ಲ.

18 ಅವುಗಳನ್ನು ಮಾಡುವವರು,

ಅವುಗಳಲ್ಲಿ ಭರವಸವಿಡುವವರು ಅವುಗಳಂತೆಯೇ.

19 ಇಸ್ರಾಯೇಲನ ಮನೆತನದವರೇ,

ಯೆಹೋವನನ್ನು ಕೊಂಡಾಡಿರಿ;

ಆರೋನನ ಮನೆತನದವರೇ,

ಯೆಹೋವನನ್ನು ಕೊಂಡಾಡಿರಿ.

20 ಲೇವಿಯ ಮನೆತನದವರೇ,

ಯೆಹೋವನನ್ನು ಕೊಂಡಾಡಿರಿ;

ಯೆಹೋವನ ಭಕ್ತರೇ,

ಯೆಹೋವನನ್ನು ಕೊಂಡಾಡಿರಿ.

21 ಯೆರೂಸಲೇಮಿನಲ್ಲಿ ವಾಸಿಸುವ ಚೀಯೋನಿನ ದೇವರಿಗೆ,

ಕೀರ್ತಿ ಉಂಟಾಗಲಿ,

ಯೆಹೋವನಿಗೆ ಸ್ತೋತ್ರ!

Veja também

Publicidade
Bíblia Online Bíblia Online

Bíblia Online • Versão: 2026-06-18_14-04-22-