Publicidade

Salmos 99

ಯೆಹೋವರಾಜನ ಪವಿತ್ರತೆಯನ್ನು ಕೊಂಡಾಡುವುದು

1 ಯೆಹೋವನು ರಾಜ್ಯಾಧಿಕಾರವನ್ನು ವಹಿಸಿದ್ದಾನೆ;

ಜನಾಂಗಗಳು ನಡುಗಲಿ.

ಕೆರೂಬಿಯರ ಮಧ್ಯದಲ್ಲಿ ಆಸೀನನಾಗಿರುವಾತನು ಆಳುತ್ತಾನೆ;

ಭೂಮಿಯು ಕಂಪಿಸಲಿ.

2 ಚೀಯೋನಿನಲ್ಲಿರುವ ಯೆಹೋವನು ದೊಡ್ಡವನು;

ಆತನು ಎಲ್ಲಾ ಜನಾಂಗಗಳಲ್ಲಿ ಮಹೋನ್ನತನು.

3 ಅವರು ಯೆಹೋವನ ಭಯಂಕರವಾದ ಮಹಾನಾಮವನ್ನು ಕೊಂಡಾಡಲಿ;

ಆತನು ಪರಿಶುದ್ಧನು.

4 ಪರಾಕ್ರಮಿಯಾದ ಅರಸನು ನೀತಿಯನ್ನು ಪ್ರೀತಿಸುತ್ತಾನೆ;

ಯಥಾರ್ಥವಾದದ್ದನ್ನು ಸ್ಥಾಪಿಸಿದವನೂ,

ಯಾಕೋಬ್ಯರಲ್ಲಿ ನ್ಯಾಯ, ನೀತಿಗಳನ್ನು ಸಿದ್ಧಿಗೆ ತಂದವನೂ ನೀನೇ.

5 ನಮ್ಮ ಯೆಹೋವ ದೇವರನ್ನು ಘನಪಡಿಸಿರಿ;

ಆತನ ಪಾದಪೀಠದ ಮುಂದೆ ಅಡ್ಡಬೀಳಿರಿ.

ಆತನು ಪರಿಶುದ್ಧನು.

6 ಆತನ ಯಾಜಕರಲ್ಲಿ ಮೋಶೆ ಮತ್ತು ಆರೋನರೂ,

ಆತನ ಹೆಸರಿನಲ್ಲಿ ಪ್ರಾರ್ಥಿಸುವವರೊಳಗೆ ಸಮುವೇಲನೂ ಪ್ರಾರ್ಥಿಸಿದಾಗೆಲ್ಲ,

ಯೆಹೋವನು ಅವರಿಗೆ ಸದುತ್ತರವನ್ನು ದಯಪಾಲಿಸುತ್ತಿದ್ದನು.

7 ಆತನು ಮೇಘಸ್ತಂಭದಲ್ಲಿದ್ದು ಅವರೊಡನೆ ಮಾತನಾಡುತ್ತಿದ್ದನು;

ಅವರು ಆತನ ವಿಧಿನಿಯಮಗಳನ್ನು ಕೈಕೊಂಡವರು.

8 ನಮ್ಮ ಯೆಹೋವ ದೇವರೇ, ಅವರಿಗೆ ಸದುತ್ತರ ಕೊಟ್ಟವನು ನೀನೇ.

ನೀನು ದುಷ್ಕೃತ್ಯಗಳಿಗಾಗಿ ಅವರನ್ನು ದಂಡಿಸುತ್ತಿದ್ದರೂ,

ಕ್ಷಮಿಸುವ ದೇವರಾಗಿದ್ದಿ.

9 ನಮ್ಮ ಯೆಹೋವ ದೇವರನ್ನು ಘನಪಡಿಸಿರಿ;

ಆತನ ಪರಿಶುದ್ಧಪರ್ವತದ ಕಡೆಗೆ ಅಡ್ಡಬೀಳಿರಿ.

ನಮ್ಮ ಯೆಹೋವ ದೇವರು ಪರಿಶುದ್ಧನು.

Veja também

Publicidade
Bíblia Online Bíblia Online

Bíblia Online • Versão: 2026-06-18_14-04-22-