Publicidade

Salmos 143

ಶಿಕ್ಷಾರಕ್ಷಣೆಗಳಿಗಾಗಿ ಪ್ರಾರ್ಥನೆ
ದಾವೀದನ ಕೀರ್ತನೆ.

1 ಯೆಹೋವನೇ, ನನ್ನ ಪ್ರಾರ್ಥನೆಯನ್ನು ಆಲಿಸು;

ನನ್ನ ಬಿನ್ನಹಕ್ಕೆ ಕಿವಿಗೊಡು;

ನಿನ್ನ ನೀತಿ ಸತ್ಯತೆಗಳಿಗೆ ಅನುಸಾರವಾಗಿ ಸದುತ್ತರವನ್ನು ದಯಪಾಲಿಸು.

2 ನಿನ್ನ ಸೇವಕನನ್ನು ವಿಚಾರಣೆಗೆ ಗುರಿಮಾಡಬೇಡ;

ನಿನ್ನ ಸನ್ನಿಧಿಯಲ್ಲಿ ಯಾವ ಜೀವಿಯೂ ನೀತಿವಂತನಲ್ಲ.

3 ವೈರಿಯು ನನ್ನ ಪ್ರಾಣವನ್ನು ಹಿಂಸಿಸಿದ್ದಾನೆ;

ಜೀವವನ್ನು ನೆಲಕ್ಕೆ ಹಾಕಿ ಜಜ್ಜಿದ್ದಾನೆ.

ಕಾರ್ಗತ್ತಲೆಯಲ್ಲಿ ನನ್ನನ್ನು ಹಾಕಿದ್ದಾನೆ;

ಬಹು ಕಾಲದಿಂದ ಸತ್ತವರಂತಿದ್ದೇನೆ.

4 ನನ್ನ ಆತ್ಮವು ಕುಂದಿಹೋಗಿದೆ;

ನನ್ನ ಮನಸ್ಸು ಬೆರಗಾಗಿದೆ.

5 ಹಳೆಯ ದಿನಗಳನ್ನು ನೆನಪುಮಾಡಿಕೊಳ್ಳುತ್ತೇನೆ;

ನಿನ್ನ ಎಲ್ಲಾ ಕಾರ್ಯಗಳನ್ನು ಧ್ಯಾನಿಸುತ್ತೇನೆ;

ನಿನ್ನ ಕೈಕೆಲಸಗಳನ್ನು ಸ್ಮರಿಸುತ್ತೇನೆ;

6 ಕೈಚಾಚಿ ಬೇಡುತ್ತೇನೆ;

ಒಣನೆಲವು ನೀರಿಗಾಗಿ ಹೇಗೋ,

ಹಾಗೆಯೇ ನನ್ನ ಆತ್ಮವು ನಿನಗಾಗಿ ತವಕಪಡುತ್ತದೆ. ಸೆಲಾ

7 ಯೆಹೋವನೇ, ಬೇಗನೆ ಸದುತ್ತರವನ್ನು ದಯಪಾಲಿಸು;

ನನ್ನ ಆತ್ಮವು ಕುಂದಿಹೋಗಿದೆ.

ನೀನು ವಿಮುಖನಾದರೆ ಸಮಾಧಿಯಲ್ಲಿ ಸೇರಿದವರಿಗೆ ನಾನು ಸಮಾನನಾಗಿರುವೆನು.

8 ಹೊತ್ತಾರೆ ನಿನ್ನ ಕೃಪೆಯು ನನಗೆ ಪ್ರಕಟವಾಗಲಿ;

ನಿನ್ನಲ್ಲಿ ಭರವಸವಿಟ್ಟಿದ್ದೇನಲ್ಲಾ.

ನಾನು ನಡೆಯತಕ್ಕ ಮಾರ್ಗವನ್ನು ತಿಳಿಸು;

ನನ್ನ ಮನಸ್ಸನ್ನು ನಿನ್ನಲ್ಲಿಯೇ ಇಟ್ಟಿದ್ದೇನೆ.

9 ಯೆಹೋವನೇ, ನಿನ್ನನ್ನೇ ಮೊರೆಹೊಕ್ಕಿದ್ದೇನೆ;

ಶತ್ರುಗಳಿಂದ ನನ್ನನ್ನು ಬಿಡಿಸು.

10 ನಿನ್ನ ಚಿತ್ತದಂತೆ ನಡೆಯಲು ನನಗೆ ಕಲಿಸು,

ನನ್ನ ದೇವರು ನೀನಲ್ಲವೋ?

ಶುಭಕಾರಿಯಾಗಿರುವ ನಿನ್ನ ಆತ್ಮನು ನನ್ನನ್ನು ಸಮದಾರಿಯಲ್ಲಿ ನಡೆಸಲಿ.

11 ಯೆಹೋವನೇ, ನಿನ್ನ ಹೆಸರಿನ ನಿಮಿತ್ತ ನನ್ನನ್ನು ಉಜ್ಜೀವಿಸಮಾಡು;

ನಿನ್ನ ನೀತಿಗನುಸಾರವಾಗಿ ನನ್ನ ಪ್ರಾಣವನ್ನು ವಿಪತ್ತಿನಿಂದ ಬಿಡಿಸು.

12 ನನಗೆ ಕೃಪೆತೋರಿಸಿ ನನ್ನ ವೈರಿಗಳನ್ನು ಖಂಡಿಸಿಬಿಡು.

ನನ್ನ ಪ್ರಾಣಕಂಟಕರನ್ನೆಲ್ಲಾ ಕಡಿದುಹಾಕು;

ನಾನು ನಿನ್ನ ಸೇವಕನಲ್ಲವೇ.

Veja também

Publicidade
Bíblia Online Bíblia Online

Bíblia Online • Versão: 2026-06-22_10-02-25-