Pular para o conteúdo
Publicidade

ಕೀರ್ತನೆಗಳು 62

ದೇವರ ಆಶ್ರಯದಲ್ಲಿರುವವರ ಮನಶ್ಯಾಂತಿ

ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಯೆದುತೂನನ ರೀತಿಯಲ್ಲಿ ಹಾಡತಕ್ಕದ್ದು; ದಾವೀದನ ಕೀರ್ತನೆ.

1 ನನ್ನ ಮನಸ್ಸು ದೇವರನ್ನೇ ನಂಬಿ ಶಾಂತವಾಗಿರುವುದು.

ನನ್ನ ರಕ್ಷಣೆಯು ಆತನಿಂದಲೇ.

2 ಆತನೇ ನನಗೆ ಶರಣನೂ, ರಕ್ಷಕನೂ ಮತ್ತು ದುರ್ಗವೂ;

ನಾನು ಕದಲಿದರೂ ಬೀಳೆನು.

3 ನೀವೆಲ್ಲರೂ ಒಬ್ಬ ಪುರುಷನ ಮೇಲೆ ಬಿದ್ದು,

ಅವನು ಬಾಗಿದ ಗೋಡೆಯ ಹಾಗೆ ಮತ್ತು ಕುಸಿದ ಪ್ರಾಕಾರವೋ ಎಂಬಂತೆ

ಅವನನ್ನು ಹೊಡೆದು ಕೆಡವಬೇಕೆಂದಿರುವುದು ಇನ್ನೆಷ್ಟರವರೆಗೆ?

4 ಅವನನ್ನು ಉನ್ನತಸ್ಥಾನದಿಂದ ದೊಬ್ಬುವುದೇ ಅವರ ಆಲೋಚನೆ.

ಸುಳ್ಳಾಡುವುದು ಅವರಿಗೆ ಅತಿಸಂತೋಷ;

ಬಾಯಿಂದ ಹರಸಿ ಮನಸ್ಸಿನಿಂದ ಶಪಿಸುತ್ತಾರೆ. ಸೆಲಾ

5 ನನ್ನ ಮನವೇ, ದೇವರನ್ನೇ ನಂಬಿ ಶಾಂತವಾಗಿರು.

ನನ್ನ ನಿರೀಕ್ಷೆಯು ನೆರವೇರುವುದು ಆತನಿಂದಲೇ.

6 ಆತನೇ ನನಗೆ ಶರಣನೂ, ರಕ್ಷಕನೂ ಮತ್ತು ದುರ್ಗವೂ;

ನಾನು ಕದಲುವುದಿಲ್ಲ.

7 ನನ್ನ ರಕ್ಷಣೆಗೂ, ಮಾನಕ್ಕೂ ದೇವರೇ ಆಧಾರ;

ನನಗೆ ಬಲವಾದ ದುರ್ಗವೂ, ಆಶ್ರಯವೂ ದೇವರಲ್ಲಿಯೇ.

8 ಜನರೇ, ಯಾವಾಗಲೂ ಆತನನ್ನೇ ನಂಬಿ,

ನಿಮ್ಮ ಹೃದಯವನ್ನು ಆತನ ಮುಂದೆ ತೆರೆಯಿರಿ;

ದೇವರು ನಮ್ಮ ಆಶ್ರಯವು. ಸೆಲಾ

9 ನರರು ಬರೀ ಉಸಿರೇ;

ನರಾಧಿಪತಿಗಳು ಬರೀ ಮಾಯವೇ.

ಅವರೆಲ್ಲರನ್ನು ತ್ರಾಸಿನಲ್ಲಿ ತೂಗಿ ನೋಡಿದರೆ ಉಸಿರಿಗಿಂತಲೂ ಹಗುರ.

10 ಅನ್ಯಾಯದಿಂದ ಸಂಪಾದಿಸಿದ್ದನ್ನು ನೆಚ್ಚಬೇಡಿರಿ;

ಸುಲಿಗೆಯಿಂದ ಗಳಿಸಿ ಅಹಂಕಾರಪಡಬೇಡಿರಿ;

ಹೆಚ್ಚಿದ ಆಸ್ತಿಯಲ್ಲಿ ಮನಸ್ಸಿಡಬೇಡಿರಿ.

11 ಸರ್ವಾಧಿಕಾರವು ದೇವರದೇ ಎಂದು ದೇವರು ಒಮ್ಮೆ ಅಲ್ಲ,

ಎರಡಾವರ್ತಿ ಹೇಳಿದ್ದನ್ನು ಕೇಳಿದ್ದೇನೆ.

12 ಕರ್ತನೇ, ನೀನು ಪ್ರೀತಿಸ್ವರೂಪನಾಗಿ

ಪ್ರತಿಯೊಬ್ಬನಿಗೆ ಅವನವನ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಕೊಡುವಂಥವನಲ್ಲವೇ.

Estes versículos te tocaram? Ore agora!

+581 estão orando agora.

Junte-se à corrente de oração.